ಪತ್ನಿಯ ಹತ್ಯೆಗೈದ ಪತಿಯ ಬಂಧನ; ಆರೋಪಿಯ ಪತ್ತೆಗೆ ನೆರವಾದ ವಾಷಿಂಗ್ ಮೆಷಿನ್!

Update: 2024-01-30 11:23 GMT

ನಿಶಾ ನಾಪಿತ್ (Photo:NDTV)

ಭೋಪಾಲ್: ಅಧಿಕಾರಿಯಾಗಿದ್ದ ತನ್ನ ಪತ್ನಿಯನ್ನು ನಿರುದ್ಯೋಗಿ ಪತಿ ಹತ್ಯೆ ಮಾಡಿದ ಘಟನೆ ನಿನ್ನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪತಿ ಈ ಕೃತ್ಯಕ್ಕೆ ಸಂಬಂಧಿಸಿದ ಎಲ್ಲ ಪುರಾವೆಗಳನ್ನು ಹುದುಗಿಸಿ, ಸಾವಿನ ಬಗ್ಗೆ ಪೊಲೀಸರಿಗೆ ಸುಳ್ಳುಹೇಳಿ ದಾರಿ ತಪ್ಪಿಸಲುಸ ಯತ್ನಿಸಿದ್ದಾನೆ. ದಿಂದೋರಿ ಜಿಲ್ಲೆಯ ಶಹಾಪುರದಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ನಿಶಾ ನಾಪಿತ್ ತನ್ನ ಸೇವಾ ಪುಸ್ತಕ, ವಿಮೆ ಮತ್ತು ಬ್ಯಾಂಕ್ ಖಾತೆಯಲ್ಲಿ ತನ್ನನ್ನು ನಾಮಿನಿಯಾಗಿ ದಾಖಲಿಸದೇ ಇದ್ದುದೇ ಆರೋಪಿ ಪತಿಯ ಸಿಟ್ಟಿಗೆ ಕಾರಣವಾಗಿದೆ ಎಂದು ವರದಿಯಾಗಿದೆ.

ಆರೋಪಿ ಮನೀಶ್ ಶರ್ಮಾ ದಿಂಬಿನ ಸಹಾಯದಿಂದ ಆಕೆಯನ್ನು ಉಸಿರುಗಟ್ಟಿಸಿ ಕೊಂದು, ರಕ್ತಸಿಕ್ತ ಬಟ್ಟೆಗಳನ್ನು ತೊಳೆದು ಎಲ್ಲ ಪುರಾವೆಗಳನ್ನು ನಾಶಪಡಿಸಲು ಆರೋಪಿ ಪ್ರಯತ್ನಿಸಿದ್ದ. ಮನೆಯಲ್ಲಿದ್ದ ವಾಷಿಂಗ್ ಮೆಷಿನ್‍ನಲ್ಲಿ ದಿಂಬಿನ ಕವರ್ ಮತ್ತು ಬೆಡ್‍ಶೀಟ್ ಪತ್ತೆ ಮಾಡಿದ ಪೊಲೀಸರು ಇದೇ ಸುಳಿವನ್ನು ಆಧರಿಸಿ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಹತ್ಯೆಗೀಡಾದ ಪತ್ನಿಯ ಸಹೋದರಿ ನಿರ್ಮಲಾ ನಾಪಿತ್, ಮನೀಶ್ ಶರ್ಮಾ ವಿರುದ್ಧ ಕೊಲೆ ಆರೋಪ ಹೊರಿಸಿ, ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು.

"ಹಣಕ್ಕಾಗಿ ನಿಶಾಗೆ ಕಿರುಕುಳ ನೀಡುತ್ತಿದ್ದ. ನಮ್ಮ ಅಕ್ಕನಿಗೆ ಯಾವುದೇ ಕಾಯಿಲೆ ಇರಲಿಲ್ಲ. ಮನೀಶ್ ಈ ಕೃತ್ಯ ಎಸಗಿದ್ದಾನೆ. ಆಕೆಯ ನೆರವಿಗಾಗಿ ಆಕೆಯ ಕೋಣೆಗೆ ಹೋಗಲೂ ಬಿಡುತ್ತಿರಲಿಲ್ಲ" ಎಂದು ಸಹೋದರಿ ಆರೋಪಿಸಿದ್ದಾರೆ.

 ಶರ್ಮಾ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 302, 304ಬಿ ಮತ್ತು 201ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News