ಪಟಾಕಿ ನಿಷೇಧ ಉಲ್ಲಂಘನೆ ಸಂಬಂಧ ಎಷ್ಟು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ: ದಿಲ್ಲಿ ಪೊಲೀಸರನ್ನು ಪ್ರಶ್ನಿಸಿದ ಟಿಎಂಸಿ ನಾಯಕ

Update: 2023-11-13 14:20 GMT

ಸಾಂದರ್ಭಿಕ ಚಿತ್ರ - Photo : PTI 

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನಿಷೇಧದ ಹೊರತಾಗಿಯೂ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹಲವಾರು ರಾಜಕಾರಣಿಗಳು ಮತ್ತು ಜನರು ಪಟಾಕಿಗಳನ್ನು ಸಿಡಿಸಿದ್ದು, ಈ ಸಂಬಂಧ ಎಷ್ಟು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ದಿಲ್ಲಿ ಜಂಟಿ ಪೊಲೀಸ್ ಆಯುಕ್ತರಿಗೆ ದೀಪಾವಳಿಯ ಮರು ದಿನ ಪತ್ರ ಬರೆದು ಟಿಎಂಸಿ ನಾಯಕ ಸಾಕೇತ್ ಗೋಖಲೆ ಪ್ರಶ್ನಿಸಿದ್ದಾರೆ.

ಈ ಸಂಬಂಧ ಹೊಸದಿಲ್ಲಿಯ ಜಂಟಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಗೋಖಲೆ, “ದಿಲ್ಲಿಯಲ್ಲಿ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವು ಜಾರಿಯಲ್ಲಿರುವುದು ನಿಮಗೆ ತಿಳಿದಿದೆ ಎಂದು ಭಾವಿಸುತ್ತೇನೆ. ಆದರೆ, ನವೆಂಬರ್ 12, ದೀಪಾವಳಿಯಂದು ನಗರದಾದ್ಯಂತ ಜನರು ಪಟಾಕಿ ಸಿಡಿಸುತ್ತಿರುವುದು ಕಂಡು ಬಂದಿದೆ. ವಾಸ್ತವವಾಗಿ ಹೊಸದಿಲ್ಲಿಯಲ್ಲೂ ಕೂಡಾ ಸಾರ್ವಜನಿಕ ಸೇವಕರು ಹಾಗೂ ರಾಜಕಾರಣಿಗಳು ತಮ್ಮ ದೀಪಾವಳಿ ಔತಣ ಕೂಟಗಳಲ್ಲಿ ಪಟಾಕಿಗಳನ್ನು ಸಿಡಿಸಿರುವ ನಿದರ್ಶನಗಳಿವೆ” ಎಂದು ಹೇಳಿದ್ದಾರೆ.

ನವೆಂಬರ್ 11ರಂದು ದಿಲ್ಲಿಯಲ್ಲಿ ಮಳೆ ಸುರಿದಿದ್ದರಿಂದ ವಾಯು ಮಾಲಿನ್ಯ ಮಟ್ಟವನ್ನು ಸೂಚಿಸುವ ವಾಯು ಗುಣಮಟ್ಟ ಸೂಚ್ಯಂಕವು ಸುಮಾರು 120ರ ಆಸುಪಾಸಿಗೆ ಕುಸಿದಿತ್ತು ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ.

“ಆದರೆ, ನವೆಂಬರ್ 12ರ ರಾತ್ರಿ ವಾಯು ಗುಣಮಟ್ಟ ಸೂಚ್ಯಂಕವು ಅಪಾಯಕಾರಿ ಮಟ್ಟವಾದ 999 ಅನ್ನು ದಾಟಿದ್ದು, ಅದಕ್ಕೆ ಪಟಾಕಿಗಳನ್ನು ಸಿಡಿಸಿದ್ದು ಮುಖ್ಯ ಕಾರಣ” ಎಂದು ಅವರು ಪ್ರತಿಪಾದಿಸಿದ್ದಾರೆ.

ಸುಪ್ರೀಂ ಕೋರ್ಟ್ ನ ನಿರ್ದೇಶನವನ್ನು ದಿಲ್ಲಿ ಪೊಲೀಸ್ ಇಲಾಖೆಯ ಮೂಲಕ ಜಾರಿಗೊಳಿಸುವ ಜವಾಬ್ದಾರಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ್ದಾಗಿದೆ ಎಂದೂ ಅವರು ಹೇಳಿದ್ದಾರೆ.

ದಿಲ್ಲಿ ಪೊಲೀಸರೆದುರು ಹಲವಾರು ಪ್ರಶ್ನೆಗಳನ್ನು ಒಡ್ಡಿರುವ ಗೋಖಲೆ, ನವೆಂಬರ್ 12 ಹಾಗೂ ನವೆಂಬರ್ 13ರಂದು ದಿಲ್ಲಿ ಪೊಲೀಸ್ ಇಲಾಖೆ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ಪಟಾಕಿ ಸಿಡಿಸಿರುವ ಖಾಸಗಿ ವ್ಯಕ್ತಿಗಳು ಅಥವಾ ಗುಂಪುಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳೆಷ್ಟು ಹಾಗೂ ನವೆಂಬರ್ 12ರ ರಾತ್ರಿ ಮತ್ತು ನವೆಂಬರ್ 13ರ ಬೆಳಗ್ಗೆ ದಿಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ಪಟಾಕಿಗಳ ಒಟ್ಟು ಮೊತ್ತವೆಷ್ಟು ಎಂಬ ಕುರಿತು ವಿವರ ಒದಗಿಸುವಂತೆ ಕೋರಿದ್ದಾರೆ.

ನವೆಂಬರ್ 8ರಿಂದ ನವೆಂಬರ್ 13ರ ನಡುವೆ ದಿಲ್ಲಿ ಪೊಲೀಸ್ ಇಲಾಖೆ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ಕಾನೂನುಬಾಹಿರವಾಗಿ ಪಟಾಕಿ ಮಾರಾಟ ಮಾಡುತ್ತಿದ್ದ ಖಾಸಗಿ ವ್ಯಕ್ತಿಗಳು ಅಥವಾ ಗುಂಪುಗಳ ವಿರುದ್ಧ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆಯನ್ನು ಒದಗಿಸುವಂತೆಯೂ ಅವರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News