ಯೂಟ್ಯೂಬ್ ನಲ್ಲಿ ಆರೋಪ ಮಾಡುವವರನ್ನೆಲ್ಲಾ ಬಂಧಿಸಿದರೆ, ಚುನಾವಣೆಗೂ ಮುನ್ನ ಎಷ್ಟು ಮಂದಿಯನ್ನು ಬಂಧನದಲ್ಲಿಡಬೇಕಾಗುತ್ತದೆ?: ಸುಪ್ರೀಂ ಕೋರ್ಟ್ ಪ್ರಶ್ನೆ

Update: 2024-04-08 08:29 GMT

ಸುಪ್ರೀಂ ಕೋರ್ಟ್ |  PC : PTI 

ಹೊಸದಿಲ್ಲಿ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ಯೂಟ್ಯೂಬರ್ ಎ.ದುರೈಮುರುಗನ್ ಸಟ್ಟೈ ಅವರಿಗೆ ಮಂಜೂರು ಮಾಡಲಾಗಿದ್ದ ಜಾಮೀನನ್ನು ಇಂದು ಸುಪ್ರೀಂ ಕೋರ್ಟ್ ಮರು ಸ್ಥಾಪಿಸಿದೆ.

ಸಟ್ಟೈಗೆ ಮಂಜೂರು ಮಾಡಲಾಗಿದ್ದ ಜಾಮೀನನ್ನು ರದ್ದುಗೊಳಿಸಿದ್ದ ಆದೇಶವನ್ನು ಬದಿಗಿರಿಸಿದ ನ್ಯಾ. ಅಭಯ್ ಎಸ್. ಓಕಾ ಹಾಗೂ ಉಜ್ಜಲ್ ಭುಯನ್ ಅವರನ್ನೊಳಗೊಂಡ ನ್ಯಾಯಪೀಠವು, ಅವರು ತಮಗೆ ನೀಡಿದ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಲು ಬರುವುದಿಲ್ಲ ಎಂದು ಅಭಿಪ್ರಾಯ ಪಟ್ಟಿತು.

ಗಮನಾರ್ಹ ಸಂಗತಿಯೆಂದರೆ, ವಿಚಾರಣೆಯ ಸಂದರ್ಭದಲ್ಲಿ “ಯೂಟ್ಯೂಬ್ ನಲ್ಲಿ ಆರೋಪ ಮಾಡುವವರನ್ನೆಲ್ಲ ನಾವು ಕಂಬಿಯ ಹಿಂದೆ ಕಳಿಸಲು ಪ್ರಾರಂಭಿಸಿದರೆ, ಚುನಾವಣೆಗೂ ಮುನ್ನ ಎಷ್ಟು ಮಂದಿಯನ್ನು ಜೈಲಿಗೆ ಹಾಕಬೇಕಾಗುತ್ತದೆ ಊಹಿಸಿ” ಎಂದು ನ್ಯಾ. ಅಭಯ್ ಓಕಾ, ತಮಿಳುನಾಡು ಸರಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರಿಗೆ ಪ್ರಶ್ನೆ ಹಾಕಿದರು.

ಜಾಮೀನಿನ ಮೇಲಿರುವಾಗ ಯಾವುದೇ ಅಪಮಾನಕಾರಿ ಹೇಳಿಕೆ ನೀಡದಂತೆ ನ್ಯಾಯಾಲಯವು ಯೂಟ್ಯೂಬರ್ ಗೆ ಷರತ್ತು ವಿಧಿಸಬೇಕು ಎಂದು ರೋಹ್ಟಗಿ ಮನವಿ ಮಾಡಿಕೊಂಡರೂ, ಅವರ ಮಾತಿನಿಂದ ನ್ಯಾಯಪೀಠವು ತೃಪ್ತವಾಗಲಿಲ್ಲ. ಆತನ ಹೇಳಿಕೆಯು ಅಪಮಾನಕಾರಿ ಎಂದು ನಿರ್ಧರಿಸುವವರು ಯಾರು ಎಂದು ರೋಹ್ಟಗಿ ಅವರನ್ನು ನ್ಯಾ. ಅಭಯ್ ಓಕಾ ಮರು ಪ್ರಶ್ನಿಸಿದರು.

ನ್ಯಾಯಾಲಯದೆದುರು ಪ್ರಮಾಣ ಮಾಡಿ, ಜಾಮೀನು ಪಡೆದ ನಂತರವೂ ತಮಿಳುನಾಡು ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಅಪರಾಧದಲ್ಲಿ ತೊಡಗಿದ್ದಾರೆಂಬ ಆರೋಪವನ್ನು ಪರಿಗಣನೆಗೆ ತೆಗೆದುಕೊಂಡಿದ್ದ ಮದ್ರಾಸ್ ಹೈಕೋರ್ಟ್ ಸಟ್ಟೈಗೆ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಟ್ಟೈ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News