ಸಂಪುಟದಲ್ಲಿ ಎನ್ ಸಿಪಿ ಮುಖ್ಯಸ್ಥನ ಪಕ್ಕ ಕುಳಿತು ಹೊರಬಂದ ಬಳಿಕ ವಾಂತಿ ಮಾಡಿಕೊಳ್ಳುತ್ತೇನೆ: ಶಿವಸೇನೆ ಸಚಿವ

Update: 2024-08-30 03:06 GMT

 ತಾನಾಜಿ ಸಾವಂತ್ | ಅಜಿತ್ ಪವಾರ್ (PC: x.com/abpmajhatv)

ಮುಂಬೈ: ಸಂಪುಟ ಸಭೆಯಲ್ಲಿ ಎನ್ ಸಿಪಿ ಮುಖಂಡ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಪಕ್ಕ ಕುಳಿತುಕೊಂಡಿದ್ದ ನಾನು ಹೊರಬಂದ ತಕ್ಷಣ ವಾಂತಿ ಮಾಡಿಕೊಳ್ಳಬೇಕಾಯಿತು ಎಂದು ಶಿವಸೇನೆ ಸಚಿವ ತಾನಾಜಿ ಸಾವಂತ್ ಗುರುವಾರ ಹೇಳಿಕೆ ನೀಡುವ ಮೂಲಕ ಮಹಾಯುತಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ.

"ನಾನೆಂದೂ ಎನ್ ಸಿಪಿ ನಾಯಕತ್ವದ ಸಾಮೀಪ್ಯದಲ್ಲಿ ಇರಲಿಲ್ಲ. ಅವರ ಪಕ್ಕದಲ್ಲಿ ಕುಳಿತದ್ದೇ ವ್ಯತಿರಿಕ್ತ ಶಾರೀರಿಕ ಪರಿಣಾಮಕ್ಕೆ ಕಾರಣವಾಯಿತು" ಎಂದು ಸಾವಂತ್ ಹೇಳಿದ್ದಾರೆ. "ಜೀವನದಲ್ಲಿ ನಾನೆಂದೂ ಎನ್ ಸಿಪಿ ಜತೆಗೆ ಇರಲಿಲ್ಲ. ನಾವು ಅಕ್ಕಪಕ್ಕ ಕುಳಿತೆವು. ಆದರೆ ಹೊರಬಂದ ಬಳಿಕ ವಾಂತಿ ಮಾಡಿಕೊಂಡೆವು" ಎಂದು ವಿವರಿಸಿದ್ದಾರೆ.

"ನಾನು ಕಟ್ಟಾ ಶಿವ ಸೈನಿಕ. ಕಾಂಗ್ರೆಸ್ ಹಾಗೂ ಎನ್ ಸಿಪಿ ಜತೆ ನಾನು ಜೀವನದಲ್ಲಿ ಎಂದೂ ಸನಿಹದಲ್ಲಿ ಇರಲಿಲ್ಲ. ವಿದ್ಯಾರ್ಥಿ ಜೀವನದಿಂದಲೂ ಅಂಥ ಪರಿಸ್ಥಿತಿ ಬರಲಿಲ್ಲ. ಇದು ವಾಸ್ತವ. ಇಂದು ಕೂಡಾ ಸಂಪುಟ ಸಭೆಯಲ್ಲಿ ನಾನು ಅವರ ಪಕ್ಕ ಕುಳಿತರೆ ಹೊರಬಂದ ಬಳಿಕ ವಾಂತಿ ಮಾಡಿಕೊಳ್ಳುತ್ತೇನೆ. ಈ ಹೇಳಿಕೆಗೆ ನಾನು ಬದ್ಧ" ಎಂದು ಸಾರ್ವಜನಿಕ ಸಮಾರಂಭದಲ್ಲಿ ಹೇಳಿದರು.

ಆದರೆ ಎನ್ ಸಿಪಿ ನಾಯಕರು ಇದಕ್ಕೆ ಸೌಮ್ಯವಾಗಿ ಪ್ರತಿಕ್ರಿಯಿಸಿದ್ದಾರೆ. "ತಾನಾಜಿ ಸಾವಂತ್ ಅವರ ವಾಂತಿಗೆ ಕಾರಣ ಏನು ಗೊತ್ತಿಲ್ಲ. ತಾನಾಜಿ ಸಾವಂತ್ ಆರೋಗ್ಯ ಸಚಿವರು. ಬಹುಶಃ ಆರೋಗ್ಯ ಪರಿಸ್ಥಿತಿ ಅದಕ್ಕೆ ಕಾರಣವಾಗಿರಬೇಕು. ಆದರೆ ಮಹಾಯುತಿಯಲ್ಲಿ ಇದ್ದುಕೊಂಡು, ಅವರು ವಾಂತಿ ಮಾಡಿಕೊಳ್ಳುತ್ತಾರೆ ಎಂದಾದರೆ, ಅದಕ್ಕೆ ಕಾರಣ ಏನು ಎಂದು ಏಕನಾಥ್ ಶಿಂಧೆಯವರೇ ಹೇಳಬೇಕು" ಎಂದು ಎನ್ ಸಿಪಿ ಶಾಸಕ ಅಮೋಲ್ ಮಿಟ್ಕರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News