'ರಾಹೋವಣ' ನಾಟಕದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ 1.2 ಲಕ್ಷ ದಂಡ ವಿಧಿಸಿದ ಮುಂಬೈ ಐಐಟಿ

Update: 2024-06-20 08:45 GMT

ಮುಂಬೈ: ಮುಂಬೈ ಐಐಟಿಯ ಕಲಾ ಉತ್ಸವದ ವೇಳೆ 'ರಾಹೋವಣ' ಎಂಬ ನಾಟಕದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮುಂಬೈ ಐಐಟಿ 1.2 ಲಕ್ಷ ರೂಪಾಯಿಗಳವರೆಗೆ ಅಂದರೆ ಒಂದು ಸೆಮಿಸ್ಟರ್ ಶುಲ್ಕದಷ್ಟು ದಂಡ ವಿಧಿಸಿದೆ.

ರಾಮಾಯಣವನ್ನು ಆಧರಿಸಿದ ಈ ನಾಟಕ ರಾಮ ಮತ್ತು ಸೀತೆಯ ಬಗ್ಗೆ ಅವಹೇಳನಕಾರಿ ಅಂಶಗಳನ್ನು ಒಳಗೊಂಡಿದ್ದು, ಹಿಂದುತ್ವವನ್ನು ಅಗೌರವಿಸಿದೆ ಎಂದು ವಿದ್ಯಾರ್ಥಿಗಳ ಒಂದು ಗುಂಪು ಆಪಾದಿಸಿತ್ತು.

ಇತರ ಏಳು ವಿದ್ಯಾರ್ಥಿಗಳ ವಿರುದ್ಧವೂ ಶಿಕ್ಷಾಕ್ರಮ ಕೈಗೊಂಡಿದ್ದು, ಇದರ ಸ್ವರೂಪ ಮತ್ತು ದಂಡದ ಮೊತ್ತದ ವಿವರ ತಿಳಿದು ಬಂದಿಲ್ಲ. ಸಂಸ್ಥೆ ಕ್ರಮ ಕೈಗೊಂಡ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ಹೇಳಿಕೆ ನೀಡಲು ಸಂಸ್ಥೆಯ ವಕ್ತಾರರು ನಿರಾಕರಿಸಿದ್ದಾರೆ.

ಜಾಗತಿಕ ಕ್ಯೂಎಸ್ ರ್ಯಾಂಕಿಂಗ್-2025ರಲ್ಲಿ ಭಾರತದಲ್ಲೇ ಅಗ್ರಸ್ಥಾನದಲ್ಲಿರುವ ಮುಂಬೈ ಐಐಟಿ ಜೂನ್ 4ರಂದು ಈ ದಂಡನಾ ನೋಟಿಸ್ ನೀಡಿದೆ. ಇದಕ್ಕೂ ಮುನ್ನ ಒಂದು ಶಿಸ್ತುಸಮಿತಿ ಸಭೆಯನ್ನು ಮೇ 8ರಂದು ನಡೆಸಲಾಗಿದ್ದು, ಈ ನಾಟಕದ ಬಗೆಗಿನ ದೂರಿನ ಬಗ್ಗೆ ಪರಿಶೀಲಿಸಿತ್ತು. ಆಕ್ಷೇಪಾರ್ಹ ನಾಟಕ ಪ್ರದರ್ಶಿಸಿದ್ದರು ಎನ್ನಲಾದ ವಿದ್ಯಾರ್ಥಿಗಳು ಕೂಡಾ ಇದರಲ್ಲಿ ಭಾಗವಹಿಸಿದ್ದು, ಸಭೆಯ ನಡಾವಳಿ ಆಧಾರದಲ್ಲಿ ದಂಡನಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News