ಮಧ್ಯಪ್ರದೇಶ: ಮತ ಎಣಿಕೆಗಿಂತ ಮುನ್ನವೇ ಅಂಚೆ ಮತಪತ್ರಗಳನ್ನು ತೆರೆಯಲಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್‌

Update: 2023-11-28 07:56 GMT

Screengrab:X/@INCMP

ಗ್ವಾಲಿಯರ್:‌ ಡಿಸೆಂಬರ್‌ 3ರಂದು ಮತ ಎಣಿಕೆ ನಡೆಯುವ ಮುನ್ನವೇ ಬಾಲಾಘಾಟ್‌ ಅಧಿಕಾರಿಗಳು ಅಂಚೆ ಮತಪತ್ರಗಳನ್ನು ತೆರೆದಿದ್ದಾರೆದು ಮಧ್ಯ ಪ್ರದೇಶ ಕಾಂಗ್ರೆಸ್‌ ಆರೋಪಿಸಿದೆ. ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ ನಾಥ್‌ ಈ ಕುರಿತಂತೆ ವೀಡಿಯೋವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದು ಅದೀಗ ವೈರಲ್‌ ಆಗಿದೆ.

ಅಂಚೆ ಮತಪತ್ರಗಳ ಸಂಭಾವ್ಯ ತಿರುಚಿವಿಕೆ ಕುರಿತಂತೆ ಕಾಂಗ್ರೆಸ್‌ ಪಕ್ಷ ಈಗಾಗಲೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಎಂದು ಕಮಲ್‌ ನಾಥ್‌ ಹೇಳಿದ್ದಾರೆ.

“ಇದೊಂದು ಗಂಭೀರ ವಿಚಾರ. ತಕ್ಷಣ ಕ್ರಮಕೈಗೊಳ್ಳಬೇಕಿದೆ. ಕಾಂಗ್ರೆಸ್‌ ಕಾರ್ಯಕರ್ತರು ಎಚ್ಚರಿಕೆಯಿಂದಿರುವಂತೆ ಮನವಿ ಮಾಡುತ್ತೇನೆ,” ಎಂದು ಅವರು ಬರೆದಿದ್ದಾರೆ.

ಸ್ಟ್ರಾಂಗ್‌ ರೂಂ ಒಂದರಲ್ಲಿ ಅಧಿಕಾರಿಗಳು ಅಂಚೆ ಮತಪತ್ರಗಳ ವಿಂಗಡಣೆ ನಡೆಸುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಕೆಲ ಜನರು ತಮಗೆ ಮಾಹಿತಿ ನೀಡಬೇಕಿತ್ತು ಎಂದು ಹೇಳುವುದೂ ಕೇಳಿಸುತ್ತದೆ.

ಜಿಲ್ಲಾ ಕಲೆಕ್ಟರ್‌ ಅವರು ಸ್ಟ್ರಾಂಗ್‌ ರೂಂ ತೆರೆಯುವಂತೆ ಮಾಡಿ ನಂತರ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆ ಅಧಿಕಾರಿಗಳು ಅಂಚೆಮತಪತ್ರಗಳನ್ನು ತೆರೆದಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಅಂಚೆ ಮತಪತ್ರಗಳ ನೋಡಲ್‌ ಅಧಿಖಾರಿಯಲ್ಲಿ ಪ್ರಾದೇಶಿಕ ಆಯುಕ್ತರು ಈ ಘಟನೆಗೆ ಸಂಬಂಧಿಸಿದಂತೆ ಅಮಾನತುಗೊಳಿಸಿದ್ದಾರೆಂದು ಮೂಲಗಳು ಹೇಳಿವೆ.

ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಮ್ಯಾಜಿಸ್ಟ್ರೇಟ್‌ ಗೋಪಾಲ್‌ ಸೋನಿ, “ಎಲೆಕ್ಟ್ರಾನಿಕಲಿ ಟ್ರಾನ್ಸ್‌ಮಿಟೆಡ್‌ ಪೋಸ್ಟಲ್‌ ಬ್ಯಾಲಟ್‌ ಸಿಸ್ಟಂ ಅನ್ನು ಇರಿಸಿಕೊಂಡು ಅವುಗಳನ್ನು “50ರ ಬಂಡಲ್‌ಗಳಲ್ಲಿ” ವಿಂಗಡಿಸುವುದು ಸಾಮಾನ್ಯ ಪ್ರಕ್ರಿಯೆ. ಇಡೀ ಪ್ರಕ್ರಿಯೆ ಸೀಸಿಟಿವಿ ಕ್ಯಾಮರಾ ಎದುರು ನಡೆಯುತ್ತವೆ ಹಾಗೂ ಬಾಗಿಲಲ್ಲಿ ಭದ್ರತಾ ಸಿಬ್ಬಂದಿಗಳಿರುತ್ತಾರೆ” ಎಂದು ಅವರು ಹೇಳಿದ್ದಾರೆ.

ಇಡೀ ಪ್ರಕ್ರಿಯೆಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲಾಗಿದೆ ಎಂದೂ ಅವರು ಹೇಳಿದ್ದಾರೆ. “ಬಾಲಾಘಾಟ್‌ ವಿಧಾನಸಭಾ ವ್ಯಾಪ್ತಿಯ ಅಂಚೆ ಮತಪತ್ರಗಳ ಹೊರತಾಗಿ ಬಾಲಾಘಾಟ್‌ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಚೆಮತಪತ್ರಗಳನ್ನು ಇಲ್ಲಿಯೇ ಇರಿಸಲಾಗಿದೆ,” ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News