ಅಮೆರಿಕದಿಂದ 31 ಸಮರ ಡ್ರೋನ್‌ಗಳ ಖರೀದಿಗೆ ಭಾರತ ಒಪ್ಪಂದ
ಹೊಸದಿಲ್ಲಿ : ಸರಕಾರಗಳ ನಡುವಿನ ಒಪ್ಪಂದವೊಂದರ ಅಡಿಯಲ್ಲಿ, ಭಾರತವು ಅಮೆರಿಕದ ಶಸ್ತ್ರಾಸ್ತ್ರ ತಯಾರಿಕಾ ಕಂಪೆನಿ ಜನರಲ್ ಆಟೊಮಿಕ್ಸ್ ನಿಂದ 31 ಸಮರ ಡ್ರೋನ್‌ಗಳನ್ನು ಖರೀದಿಸಲಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಈ ಮಹತ್ವಾಕಾಂಕ್ಷಿ ಒಪ್ಪಂದಕ್ಕೆ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಂಗಳವಾರ ಸಹಿ ಹಾಕಲಾಗಿದೆ. 31 ಸಮರ ಡ್ರೋನ್‌ಗಳ ಖರೀದಿಗೆ ಕಳೆದ ವಾರ ಭದ್ರತೆ ಕುರಿತ ಸಂಪುಟ ಸಮಿತಿಯು ಅನುಮೋದನೆ ನೀಡಿದೆ.
ಒಪ್ಪಂದವನ್ನು ಅಂತಿಮಗೊಳಿಸುವುದಕ್ಕಾಗಿ ಅಮೆರಿಕದ ಸೇನಾ ಮತ್ತು ಕಾರ್ಪೊರೇಟ್ ಅಧಿಕಾರಿಗಳ ತಂಡವೊಂದು ಭಾರತದಲ್ಲಿದೆ.
ಒಪ್ಪಂದದ ಪ್ರಕಾರ, ಭಾರತೀಯ ನೌಕಾಪಡೆಯು 15 ‘ಸೀ ಗಾರ್ಡಿಯನ್’ ಡ್ರೋನ್‌ಗಳನ್ನು ಪಡೆದರೆ, ಭಾರತೀಯ ವಾಯು ಪಡೆ ಮತ್ತು ಭೂಸೇನೆ ತಲಾ ಎಂಟು ‘ಸ್ಕೈ ಗಾರ್ಡಿಯನ್’ ಡ್ರೋನ್‌ಗಳನ್ನು ಸ್ವೀಕರಿಸಲಿವೆ.
32,000 ಕೋಟಿ ರೂಪಾಯಿ ಮೊತ್ತದ ಒಪ್ಪಂದ ಇದಾಗಿದ್ದು, ಈ ಡ್ರೋನ್‌ಗಳ ನಿರ್ವಹಣೆ, ದುರಸ್ತಿ ಮತ್ತು ಸಮಗ್ರ ತಪಾಸಣೆಗಾಗಿ ಭಾರತದಲ್ಲೇ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಈ ಒಪ್ಪಂದದ ಬಗ್ಗೆ ಭಾರತವು ಅಮೆರಿಕದೊಂದಿಗೆ ಹಲವು ವರ್ಷಗಳಿಂದ ಮಾತುಕತೆ ನಡೆಸಿದೆ. ಆದರೆ, ಅಂತಿಮ ಅಡೆತಡೆಗಳನ್ನು ಕೆಲವು ವಾರಗಳ ಹಿಂದೆ ನಡೆದ ರಕ್ಷಣಾ ಖರೀದಿ ಮಂಡಳಿಯ ಸಭೆಯಲ್ಲಿ ನಿವಾರಿಸಲಾಯಿತು.
►ಡ್ರೋನ್‌ಗಳ ಕೆಲಸವೇನು?
‘ಎಮ್‌ಕ್ಯೂ-9ಬಿ ಹಂಟರ್-ಕಿಲ್ಲರ್’ ಡ್ರೋನ್‌ಗಳು ಮುಖ್ಯವಾಗಿ ಚೀನಾ ಜೊತೆಗಿನ ವಿವಾದಿತ ಗಡಿಯುದ್ದಕ್ಕೂ ಭಾರತೀಯ ಸಶಸ್ತ್ರ ಪಡೆಗಳ ಬೇಹುಗಾರಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
ಎಮ್‌ಕ್ಯೂ-9ಬಿ ಡ್ರೋನ್‌ಗಳು ಎಮ್‌ಕ್ಯೂ-9 ಡ್ರೋನ್‌ಗಳ ರೂಪಾಂತರವಾಗಿದೆ. ಎಮ್‌ಕ್ಯೂ-9 ಡ್ರೋನ್‌ಗಳನ್ನು ಹೆಲ್‌ಫಯರ್ ಕ್ಷಿಪಣಿಯ ಸುಧಾರಿತ ಆವೃತ್ತಿಯ ಉಡಾವಣೆಯಲ್ಲಿ ಬಳಸಲಾಗಿತ್ತು. 2022 ಜುಲೈಯಲ್ಲಿ, ಕಾಬೂಲ್‌ನ ಕೇಂದ್ರ ಭಾಗದಲ್ಲಿ ಅಲ್-ಖಾಯಿದ ನಾಯಕ ಐಮನ್ ಅಲ್-ಝವಾಹಿರಿಯನ್ನು ಕೊಲ್ಲಲು ಇದೇ ಕ್ಷಿಪಣಿಯನ್ನು ಬಳಸಲಾಗಿತ್ತು.
ಈ ಡ್ರೋನ್‌ಗಳು ಅತ್ಯಂತ ಎತ್ತರದಲ್ಲಿ ಹಾರಾಟ ನಡೆಸಿ ಕಾರ್ಯಾಚರಣೆ ಮಾಡಲು ಶಕ್ತವಾಗಿವೆ. ಅವುಗಳು 35 ಗಂಟೆಗಳಿಗೂ ಹೆಚ್ಚು ಅವಧಿ ನಿರಂತರವಾಗಿ ಆಕಾಶದಲ್ಲಿ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಅವುಗಳು ನಾಲ್ಕು ಹೆಲ್‌ಫಯರ್ ಕ್ಷಿಪಣಿಗಳು ಮತ್ತು ಸುಮಾರು 450 ಕೆಜಿ ಬಾಂಬ್‌ಗಳನ್ನು ಒಯ್ಯಲು ಸಮರ್ಥವಾಗಿವೆ.