ಮಾಲ್ಡೀವ್ಸ್ ನ ಆರ್ಥಿಕತೆಯನ್ನು ಬಲಪಡಿಸಲು ನೆರವು ನೀಡುತ್ತಿರುವ ಭಾರತ ಮತ್ತು ಚೀನಾ | ಧನ್ಯವಾದ ಸಲ್ಲಿಸಿದ ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು
ಬೀಜಿಂಗ್/ಮಾಲೆ: ಮಾಲ್ಡೀವ್ಸ್ ದೇಶದ ಆರ್ಥಿಕತೆಯನ್ನು ಬಲಪಡಿಸಲು ನೆರವು ನೀಡುತ್ತಿರುವ ಭಾರತ ಮತ್ತು ಚೀನಾಗೆ ಧನ್ಯವಾದ ಸಲ್ಲಿಸಿರುವ ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು, ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್ ನ ಏರಿಕೆಯಾಗುತ್ತಿರುವ ಸಾಲದ ಬಿಕ್ಕಟ್ಟು ಹಾಗೂ ಅದರ ಭವಿಷ್ಯದ ಅಭಿವೃದ್ಧಿಯತ್ತ ಗಮನ ಹರಿಸಲು ಎರಡು ರಾಷ್ಟ್ರಗಳ ಪ್ರಾಮುಖ್ಯತೆ ಕುರಿತು ಒತ್ತಿ ಹೇಳಿದ್ದಾರೆ.
ಶುಕ್ರವಾರ ಮಾಲ್ಡೀವ್ಸ್ ನ 59ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಧಿಕೃತ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮುಯಿಝ್ಝು, ದೇಶದ ಸಾಲ ಮರುಪಾವತಿ ಮಾಡುವಲ್ಲಿ ಚೀನಾ ಮತ್ತು ಭಾರತ ಬಹುತೇಕ ನೆರವನ್ನು ಒದಗಿಸುತ್ತಿವೆ ಎಂದು ಸ್ಮರಿಸಿದರು.
“ಮಾಲ್ಡೀವ್ಸ್ ಜನತೆಗಾಗಿ ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸುವ, ನಮ್ಮ ದೇಶದ ಆರ್ಥಿಕ ಸಾರ್ವಭೌಮತೆಯನ್ನು ಖಾತರಿಪಡಿಸುವ ಈ ಪ್ರಯತ್ನದಲ್ಲಿ ತಮ್ಮ ಸಹಕಾರ ನೀಡುತ್ತಿರುವ ಚೀನಾ ಸರಕಾರ ಹಾಗೂ ಭಾರತ ಸರಕಾರಕ್ಕೆ ಮಾಲ್ಡೀವ್ಸ್ ಪ್ರಜೆಗಳ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ" ಎಂದು ಮುಯಿಝ್ಝು ಹೇಳಿದರು ಎಂದು ಮಾಲ್ಡೀವ್ಸ್ ನ ಸುದ್ದಿ ತಾಣವಾದ adhadhu.com ವರದಿ ಮಾಡಿದೆ.
ಹೆಲಿಕಾಪ್ಟರ್ ಗಳು ಹಾಗೂ ಭಾರತವು ದಾನವಾಗಿ ನೀಡಿರುವ ಡಾರ್ನಿಯರ್ ವಿಮಾನವನ್ನು ಕಾರ್ಯಾಚರಿಸುತ್ತಿರುವ 80 ಮಂದಿ ಭಾರತೀಯ ಸೇನಾ ಸಿಬ್ಬಂದಿಗಳನ್ನು ಮಾಲ್ಡೀವ್ಸ್ ನಿಂದ ತೆರವುಗೊಳಿಸುವ ಭಾರತ ವಿರೋಧಿ ಚುನಾವಣಾ ಅಭಿಯಾನದೊಂದಿಗೆ ಕಳೆದ ವರ್ಷ ಮುಹಮ್ಮದ್ ಮುಯಿಝ್ಝು ಅಧಿಕಾರಕ್ಕೆ ಬಂದಿದ್ದರು.
ಅಧಿಕಾರಕ್ಕೆ ಬಂದಾಗಿನಿಂದ ಚೀನಾ ಪರ ಎಂದೇ ಬಿಂಬಿತರಾಗಿರುವ ಮುಯಿಝ್ಝು ಅವಧಿಯಲ್ಲಿ ಚೀನಾವು ಮಾಲ್ಡೀವ್ಸ್ ನೊಂದಿಗೆ ಬಾಂಧವ್ಯವನ್ನು ಮತ್ತಷ್ಟು ಬಲಿಷ್ಠಗೊಳಿಸಿಕೊಂಡಿದೆ.