ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ: ಅಮಿತ್​ ಶಾ ಕ್ಷಮೆಯಾಚನೆಗೆ ಆಗ್ರಹಿಸಿ ಇಂಡಿಯಾ ಮೈತ್ರಿಕೂಟದ ಸಂಸದರಿಂದ ಪ್ರತಿಭಟನೆ

Update: 2024-12-18 07:25 GMT

Photo credit: PTI

ಹೊಸದಿಲ್ಲಿ: ಅಂಬೇಡ್ಕರ್ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ಸಂಸದರು ಸಂಸತ್ತಿನ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಹಿಡಿದುಕೊಂಡು ಸಂಸತ್ತಿನ ಹೊರಗೆ ಸಂಸದರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್, ಡಿಎಂಕೆ, ಆರ್ಜೆಡಿ, ಎಡಪಕ್ಷಗಳು ಹಾಗೂ ಆಪ್ ಸೇರಿದಂತೆ ವಿವಿಧ ಪಕ್ಷಗಳು ಸಂಸದರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಅವರು, ‘ಜೈ ಭೀಮ್’, ‘ಸಂಘದ ವಿಧಾನ ನಡೆಯುವುದಿಲ್ಲ’ ಹಾಗೂ ‘ಅಮಿತ್ ಶಾ ಕ್ಷಮೆ ಯಾಚಿಸಿ’ ಎಂಬ ಘೋಷಣೆಗಳನ್ನು ಕೂಗಿದರು.

ಸಂವಿಧಾನದ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಅಮಿತ್ ಶಾ ನೀಡಿದ ಆಕ್ಷೇಪಾರ್ಹ ಹೇಳಿಕೆಯು ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರಿಗೆ ಅಂಬೇಡ್ಕರ್ ಬಗೆಗಿರುವ ತೀವ್ರ ದ್ವೇಷವನ್ನು ತೋರಿಸುತ್ತದೆ ಹಾಗೂ ಈ ಕುರಿತು ಅಮಿತ್ ಶಾ ಕ್ಷಮೆ ಯಾಚಿಸಬೇಕು ಎಂದು ಮಂಗಳವಾರ ಕಾಂಗ್ರೆಸ್ ಆಗ್ರಹಿಸಿತ್ತು.

ಮಂಗಳವಾರ ಸಂವಿಧಾನ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, “ಇಂದು ಎಲ್ಲದಕ್ಕೂ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೆಸರೆತ್ತುವುದು ಫ್ಯಾಷನ್ ಆಗಿ ಹೋಗಿದೆ. ಇಷ್ಟು ಬಾರಿ ದೇವರ ಹೆಸರನ್ನು ಹೇಳಿದ್ದರೆ, ಏಳು ಜನ್ಮದ ಸ್ವರ್ಗವಾದರೂ ಸಿಕ್ಕಿರುತ್ತಿತ್ತು” ಎಂದು ವಿರೋಧ ಪಕ್ಷಗಳ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News