ಭಾರತ-ಚೀನಾ ಸೇನಾ ಹಿಂತೆಗೆತ ಪ್ರಕ್ರಿಯ ಪೂರ್ಣ | ದಿಪಾವಳಿಯಂದು ಉಭಯ ದೇಶಗಳ ಯೋಧರ ನಡುವೆ ಸಿಹಿ ವಿನಿಮಯ
ಹೊಸದಿಲ್ಲಿ : ದೀಪಾವಳಿ ಹಬ್ಬ ಆಚರಣೆಯ ಗುರುವಾರ ಭಾರತ ಹಾಗೂ ಚೀನಾ ಸೈನಿಕರು ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯ ಹಲವು ಗಡಿ ಕೇಂದ್ರಗಳಲ್ಲಿ ಸಿಹಿ ವಿನಿಮಯ ಮಾಡಿಕೊಂಡರು ಎಂದು ಸೇನಾ ಮೂಲಗಳು ತಿಳಿಸಿವೆ.
ಪೂರ್ವ ಲಡಾಖ್‌ನ ಡೆಮ್‌ಚೋಕ್ ಹಾಗೂ ದೆಪ್ಸಾಂಗ್ ಬಯಲು ಪ್ರದೇಶದಲ್ಲಿ ಎರಡು ಘರ್ಷಣೆಯ ಕೇಂದ್ರಗಳಲ್ಲಿ ಭಾರತ ಹಾಗೂ ಚೀನಾ ಸೇನೆ ಹಿಂತೆಗೆತ ಪ್ರಕ್ರಿಯ ಪೂರ್ಣಗೊಂಡ ದಿನದ ಬಳಿಕ ಉಭಯ ದೇಶಗಳ ಸೈನಿಕರು ಸಿಹಿ ಹಂಚಿಕೊಂಡರು. ಇದು ಭಾರತ ಹಾಗೂ ಚೀನಾ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯಲಿದೆ ಎಂದು ಹೇಳಲಾಗಿದೆ.
ದೀಪಾವಳಿ ಹಬ್ಬದ ಸಂದರ್ಭ ವಾಸ್ತವ ನಿಯಂತ್ರಣ ರೇಖೆಯ ಗಡಿ ಭದ್ರತಾ ಪಡೆ ಸಿಬ್ಬಂದಿ ಭೇಟಿಯಾಗುವ (ಬಿಪಿಎಂ) 5 ಸ್ಥಳಗಳಲ್ಲಿ ಸಿಹಿ ವಿನಿಮಯ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಎರಡು ಘರ್ಷಣೆಯ ಕೇಂದ್ರಗಳಲ್ಲಿ ಉಭಯ ಕಡೆಯ ಸೇನೆ ಹಿಂತೆಗೆತ ಪೂರ್ಣಗೊಂಡಿದೆ. ಈ ಕೇಂದ್ರಗಳಲ್ಲಿ ಶೀಘ್ರದಲ್ಲಿ ಗಸ್ತು ಆರಂಭವಾಗಲಿದೆ ಸೇನಾ ಮೂಲಗಳು ಬುಧವಾರ ತಿಳಿಸಿದ್ದವು.
ಸೇನೆ ಹಿಂತೆಗೆತದ ಬಳಿಕ ಪರಿಶೀಲನಾ ಪ್ರಕ್ರಿಯೆ ಪ್ರಗತಿಯಲ್ಲಿದೆ. ಗಸ್ತು ವಿಧಾನಗಳನ್ನು ಸೇನಾ ಕಮಾಂಡರ್ ಮೂಲಕ ನಿರ್ಧರಿಸಲಾಗುವುದು. ಸ್ಥಳೀಯ ಕಮಾಂಡರ್ ಮಟ್ಟದಲ್ಲಿ ಮಾತುಕತೆ ಮುಂದುವರಿಯಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಹಲವು ವಾರಗಳ ಮಾತುಕತೆಗಳ ನಂತರ ಭಾರತ ಹಾಗೂ ಚೀನಾ ನಡುವಿನ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಇದು 2020ರಲ್ಲಿ ಉದ್ಭವಿಸಿದ ಸಮಸ್ಯೆಗಳ ಪರಿಹಾರಕ್ಕೆ ಕಾರಣವಾಗುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ದಿಲ್ಲಿಯಲ್ಲಿ ಅಕ್ಟೋಬರ್ 21ರಂದು ಹೇಳಿದ್ದರು.