ವಿಶ್ವದಲ್ಲೇ ಗರಿಷ್ಠ ದ್ವಿಚಕ್ರ ವಾಹನ ಹೊಂದಿರುವ ದೇಶ ಭಾರತ

Update: 2023-07-25 02:38 GMT

ಸಾಂದರ್ಭಿಕ ಚಿತ್ರ Photo: PTI

ಹೊಸದಿಲ್ಲಿ: ವಿಶ್ವದಲ್ಲೇ ಗರಿಷ್ಠ ನೋಂದಾಯಿತ ದ್ವಿಚಕ್ರ ವಾಹನಗಳನ್ನು ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ರೋಡ್ ಟ್ರಾನ್ಸ್ ಪೋರ್ಟ್ ಈಯರ್ ಬುಕ್ ನ ಇತ್ತೀಚಿನ ವರದಿಯ ಪ್ರಕಾರ ಇಂಡೋನೇಷ್ಯಾ ಎರಡನೇ ಸ್ಥಾನದಲ್ಲಿದೆ. ಪ್ರಯಾಣಿಕರ ಕಾರುಗಳ ಸಂಖ್ಯೆಯಲ್ಲಿ ಭಾರತ ಎಂಟನೇ ಸ್ಥಾನದಲ್ಲಿದ್ದು, ಚೀನಾ, ಅಮೆರಿಕ ಹಾಗೂ ಜಪಾನ್ ಮೊದಲ ಮೂರು ಸ್ಥಾನಗಳನ್ನು ಹಂಚಿಕೊಂಡಿವೆ.

2020ರ ಅಂತರರಾಷ್ಟ್ರೀಯ ರಸ್ತೆ ಒಕ್ಕೂಟದ ಅಂಕಿ ಅಂಶಗಳ ಆಧಾರದಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ. ಭಾರತದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ನೋಂದಾಯಿತ ವಾಹನಗಳ ಮಾಹಿತಿ ಸಂಗ್ರಹಿಸಲಾಗಿದೆ. ಭಾರತದಲ್ಲಿ ಒಟ್ಟು 32.63 ಕೋಟಿ ವಾಹನಗಳಿದ್ದು, ಈ ಪೈಕಿ ಶೇಕಡ 75ರಷ್ಟು ದ್ವಿಚಕ್ರ ವಾಹನಗಳು. ಕಳೆದ ಮೂರು ವರ್ಷಗಳಲ್ಲಿ ಎರಡು ಕೋಟಿಗೂ ಅಧಿಕ ವಾಹನಗಳು ನೋಂದಣಿಯಾಗಿವೆ. ಇದರಿಂದಾಗಿ ಜುಲೈ ಮಧ್ಯದ ವೇಳೆಗೆ ಭಾರತದಲ್ಲಿ ಒಟ್ಟು ವಾಹನಗಳ ಸಂಖ್ಯೆ 34.8 ಕೋಟಿ ಆಗಿವೆ ಎನ್ನುವ ಅಂಶ ಸರ್ಕಾರದ ವಾಹನ್ ಪೋರ್ಟೆಲ್ನಿಂದ ತಿಳಿದು ಬರುತ್ತದೆ.

ಭಾರತದ ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ ಅತ್ಯಧಿಕ ಎಂದರೆ 3.78 ಕೋಟಿ ವಾಹನಗಳಿವೆ. ಉತ್ತರ ಪ್ರದೇಶ (3.49 ಕೋಟಿ), ತಮಿಳುನಾಡು (3.21 ಕೋಟಿ) ನಂತರದ ಸ್ಥಾನಗಳಲ್ಲಿವೆ. ಹತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳ ಪೈಕಿ ದೆಹಲಿಯಲ್ಲಿ ಗರಿಷ್ಠ 1.18 ಕೋಟಿ ವಾಹನಗಳು ನೋಂದಣಿಯಾಗಿವೆ. ಬೆಂಗಳೂರಿನಲ್ಲಿ 96.4 ಲಕ್ಷ ವಾಹನಗಳಿದ್ದು, ರಾಜ್ಯ ರಾಜಧಾನಿ ಎರಡನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ ಗರಿಷ್ಠ ಅಂದರೆ 96.4 ಲಕ್ಷ ಖಾಸಗಿ ವಾಹನಗಳು ನೋಂದಣಿಯಾಗಿದ್ದು, ಪಕ್ಕದ ಫರೀದಾಬಾದ್ ನಲ್ಲಿ ಗರಿಷ್ಠ ಎಂದರೆ 18.6 ಲಕ್ಷ ಸಾರಿಗೆ ಅಥವಾ ವಾಣಿಜ್ಯ ವಾಹನಗಳಿವೆ.

ದೇಶದಲ್ಲಿ ಇರುವ ಒಟ್ಟು ನೋಂದಾಯಿತ ವಾಹನಗಳ ಪೈಕಿ ಶೇಕಡ 34ರಷ್ಟು ವಾಹನಗಳು, ಹತ್ತು ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ 55 ನಗರಗಳಲ್ಲಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News