ಉಷ್ಣ ಮಾರುತದ ಹಿಡಿತದಲ್ಲಿ ಭಾರತ | ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ಅತ್ಯಧಿಕ ಉಷ್ಣಾಂಶ ದಾಖಲು
ಹೊಸದಿಲ್ಲಿ : ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು ಹಾಗೂ ಕೇರಳದಂತಹ ರಾಜ್ಯಗಳ ತಾಪಮಾನ ದಾಖಲಾರ್ಹ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಭಾರತ ತೀವ್ರ ಉಷ್ಣ ಮಾರುತದ ಹಿಡಿತದಲ್ಲಿ ಸಿಲುಕಿಕೊಂಡಿದೆ.
ಬಿಸಿಲಿನ ತಾಪಮಾನದಿಂದಾಗಿ ನಾಗರಿಕರು ಏದುಸಿರು ಬಿಡುತ್ತಿದ್ದಾರೆ. ಅಧಿಕಾರಿಗಳು ಬಿಸಿಲಿನ ಝಳವನ್ನು ಕಡಿಮೆ ಮಾಡಲು ಹರಸಾಹಸಪಡುತ್ತಿದ್ದಾರೆ.
ಒಡಿಶಾದ ರಾಜಧಾನಿ ನಗರ ಭುವನೇಶ್ವರದಲ್ಲಿ ತಾಪಮಾನ 43.6 ಡಿಗ್ರಿ ಸೆಲ್ಸಿಯಸ್ ದಾಖಲಾಗುವುದರೊಂದಿಗೆ ಈ ಋತುಮಾನದ ಅತ್ಯಂತ ಉಷ್ಣದ ದಿನವೆಂದು ಹೇಳಲಾಗಿದೆ. ತಾಪಮಾನದಿಂದಾಗಿ ಇಲ್ಲಿನ ನಿವಾಸಿಗಳು ಬೆವರಿ ಬಸವಳಿಯುತ್ತಿದ್ದಾರೆ.
ಭುವನೇಶ್ವರದ ಜನತೆಗೆ ಉಷ್ಣಾಂಶದ ಬೇಸಗೆ ಹೊಸತೇನಲ್ಲ. ಆದರೆ, ಈ ವರ್ಷದ ಬೇಸಿಗೆ ಉಷ್ಣಾಂಶ ಈ ಹಿಂದಿನದಕ್ಕಿಂತ ತೀವ್ರವಾಗಿದೆ. ಪೂರ್ವ ಮುಂಗಾರು ಕೊರತೆಯಿಂದ ಉಷ್ಣಾಂಶ ಉಲ್ಭಣಗೊಂಡಿದೆ. ಸಾಮಾನ್ಯವಾಗಿ ಪೂರ್ವ ಮುಂಗಾರು ಮಳೆ ಉಷ್ಣಾಂಶವನ್ನು ಕಡಿಮೆಗೊಳಿಸುತ್ತದೆ. ಒಡಿಶಾ ರಾಜ್ಯ ಸರಕಾರ ಉಷ್ಣ ಮಾರುತದ ಬಗ್ಗೆ ಎಚ್ಚರಿಕೆ ನೀಡಿದೆ. ಉಷ್ಣಾಘಾತ ಹಾಗೂ ನಿರ್ಜಲೀಕರಣದ ಬಗ್ಗೆ ಸೂಚನೆಗಳನ್ನೂ ನೀಡಿದೆ.
ನೆರೆಯ ಆಂಧ್ರಪ್ರದೇಶದಲ್ಲಿ ಇದೇ ರೀತಿಯ ಪರಿಸ್ಥಿತಿ ಇದೆ. ಆಂಧ್ರಪ್ರದೇಶ ಇತ್ತೀಚೆಗಿನ ವರ್ಷಗಳಲ್ಲಿ ಅತಿ ತೀವ್ರ ಉಷ್ಣ ಮಾರುತದ ಅನುಭವ ಪಡೆಯುತ್ತಿದೆ. ಈಗ ಕೆಲವು ಪ್ರದೇಶಗಳಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ಈ ಉಷ್ಣ ಮಾರುತವನ್ನು 58 ಮಂಡಲ (ಆಡಳಿತಾತ್ಮಕ ವಿಭಾಗಗಳಲ್ಲಿ ‘‘ಗಂಭೀರ ವರ್ಗ’’)ಎಂದು ಘೋಷಿಸಲಾಗಿದೆ. ಸಂತ್ರಸ್ತರಿಗೆ ಆಶ್ರಯ ಹಾಗೂ ವೈದ್ಯಕೀಯ ನೆರವು ನೀಡಲು ರಾಜ್ಯ ಸರಕಾರ ವಿಶೇಷ ಉಷ್ಣ ಮಾರುತ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ.
ಉಷ್ಣ ಮಾರುತದಿಂದ ಸುಡುತ್ತಿರುವ ಇನ್ನೊಂದು ರಾಜ್ಯ ಕರ್ನಾಟಕ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಈ ವರ್ಷದಲ್ಲೇ ಅತ್ಯಧಿಕ. ನಗರದ ಜನತೆ ತಮ್ಮ ಅಸ್ವಸ್ಥತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅಭಿವ್ಯಕ್ತಿಸುವ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಕುಖ್ಯಾತ ಟ್ರಾಫಿಕ್ ಜಾಮ್ ಸಮಸ್ಯೆ ಅಸಹನೀಯವಾಗಿದೆ. ಟ್ರಾಫಿಕ್ ಜಾಮ್ ಸಂದರ್ಭ ತಮ್ಮ ಕಾರಿನಲ್ಲಿ ಸಿಲುಕಿಕೊಂಡ ಪ್ರಯಾಣಿಕರು ಉಷ್ಣಾಂಶದಿಂದಾಗಿ ನರಕ ಯಾತನೆ ಅನುಭವಿಸುತ್ತಿದ್ದಾರೆ.
ಕೇರಳದಲ್ಲಿ ಅತ್ಯಂತ ಉಷ್ಣಾಂಶದ ಸ್ಥಳ ಪಾಲಕ್ಕಾಡ್ ಜಿಲ್ಲೆ. ಇಲ್ಲಿ ತಾಪಮಾನ ಸಾಮಾನ್ಯ ತಾಪಮಾನಕ್ಕಿಂತ 5 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. ಮುಂದಿನ 24 ಗಂಟೆಗಳ ಕಾಲ ನಿರ್ದಿಷ್ಟ ಸ್ಥಳಗಳಲ್ಲಿ ಹವಾಮಾನ ಮೌಲ್ಯ ಶೇ. 95 ಅನ್ನು ಮೀರುವುದರಿಂದ ಬೆಟ್ಟ ಪ್ರದೇಶಗಳನ್ನು ಹೊರತುಪಡಿಸಿ ಕೇರಳದಾದ್ಯಂತ ಉಷ್ಣಾಂಶದ ಹಾಗೂ ಅಹಿತಕರ ಹವಾಮಾನ ಕಂಡು ಬರಲಿದೆ. ಪಾಲಕ್ಕಾಡ್ ಹೊರತುಪಡಿಸಿ ಕೋಝಿಕ್ಕೋಡ್, ಮಲಪ್ಪುರಂ, ತ್ರಿಶೂರು, ಕೊಲ್ಲಂ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ತಾಪಮಾನ ಸಾಮಾನ್ಯ ತಾಪಮಾನಕ್ಕಿಂತ ಶೇ. 2ರಿಂದ 5.5ಕ್ಕೆ ಏರಿಕೆಯಾಗಲಿದೆ.
ಮುಂದಿನ 24 ಗಂಟೆಗಳಲ್ಲಿ ಒಡಿಶಾ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಉಷ್ಣ ಮಾರುತ ಮುಂದುವರಿಯುವ ಸಾಧ್ಯತೆ ಇದೆ. ಈ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.