ಭಾರತ ಯಾರದೇ ಒಬ್ಬರ ಆಸ್ತಿಯಲ್ಲ : ಇಂದೋರಿನಲ್ಲಿ ಪ್ರತಿಭಟನೆಗಳ ನಡುವೆ ರಾಹತ್ ಇಂದೋರಿ ಕವನವನ್ನು ಉಲ್ಲೇಖಿಸಿದ ದಿಲ್ಜಿತ್ ದೋಸಾಂಜ್

Update: 2024-12-10 15:26 GMT

ದಿಲ್ಜಿತ್ ದೋಸಾಂಜ್ |  PC : X \  (@diljitdosanjh) 

ಇಂದೋರ್ : ತನ್ನ ಇಂದೋರ್ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಬಜರಂಗ ದಳದ ಪ್ರತಿಭಟನೆಗಳ ನಡುವೆ ಗಾಯಕ ದಿಲ್ಜಿತ್ ದೋಸಾಂಜ್ ಆಗಸ್ಟ್ ,2022ರಲ್ಲಿ ನಿಧನರಾದ ಖ್ಯಾತ ಉರ್ದು ಕವಿ ಹಾಗೂ ಇಂದೋರ ನಿವಾಸಿ ರಾಹತ್ ಇಂದೋರಿ ಅವರಿಗೆ ಅರ್ಪಿಸಿದ್ದಾರೆ.

ದೇಶವ್ಯಾಪಿ ದಿಲ್-ಲುಮಿನಾಟಿ ಸಂಗೀತ ಪ್ರವಾಸದಲ್ಲಿರುವ ಪಂಜಾಬಿ ಗಾಯಕ ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಿ ರವಿವಾರ ಇಲ್ಲಿ ತನ್ನ ಕಾರ್ಯಕ್ರಮದಲ್ಲಿ ಇಂದೋರಿಯವರ ಪ್ರಸಿದ್ಧ ಗಝಲ್‌‘ಕಿಸೀ ಕಿ ಬಾಪ್ ಕಾ ಹಿಂದುಸ್ಥಾನ್ ಥೋಡಿ ಹೈ(ಹಿಂದುಸ್ಥಾನ ಯಾರದೇ ಅಪ್ಪನ ಸೊತ್ತಲ್ಲ)’ ಅನ್ನು ಉಲ್ಲೇಖಿಸಿದರು.

‘ಅಗರ್ ಖಿಲಾಫ್ ಹೈ ಹೋನೆ ದೋ,ಜಾನ್ ಥೋಡಿ ಹೈ. ಯೇ ಸಬ್ ಧುವಾ ಹೈ ಆಸ್ಮಾನ್ ಥೋಡಿ ಹೈ. ಸಬೀ ಕಾ ಖೂನ್ ಹೈ ಶಾಮೀಲ್ ಇಸ್ ಮಿಟ್ಟಿ ಮೆ/ಕಿಸೀ ಕಿ ಬಾಪ್ ಕಾ ಹಿಂದುಸ್ಥಾನ ಥೋಡಿ ಹೈ(ಅವರು ಪ್ರತಿಭಟಿಸುತ್ತಿದ್ದರೆ ಪ್ರತಿಭಟಿಸಲಿ ಬಿಡಿ,ಜೀವವನ್ನೇನೂ ಪಣಕ್ಕಿಟ್ಟಿಲ್ಲವಲ್ಲ. ಇದೆಲ್ಲ ಕೇವಲ ಹೊಗೆ,ಆಕಾಶವೇನಲ್ಲ. ಈ ದೇಶದ ಮಣ್ಣಿನಲ್ಲಿ ಎಲ್ಲರ ತ್ಯಾಗ ಸೇರಿದೆ/ಹಿಂದುಸ್ಥಾನ ಯಾರದೇ ಅಪ್ಪನ ಆಸ್ತಿಯಲ್ಲ’ ಎನ್ನುವುದು ರಾಹತ್ ಇಂದೋರಿಯವರ ಪ್ರಸಿದ್ಧ ಗಝಲ್.

ಇಂದೋರಿಯವರ ಈ ಘಜಲ್ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಳಲ್ಲಿ ಅನುರಣಿಸಿದ ಬಳಿಕ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ರವಿವಾರ ಇಂದೋರ ಪೋಲಿಸರನ್ನು ಸಂಪರ್ಕಿಸಿದ್ದ ಬಜರಂಗ ದಳ ನಾಯಕರು ದೋಸಾಂಜ್ ಸಂಗೀತ ಕಚೇರಿಗೆ ಅವಕಾಶ ನೀಡದಂತೆ ಆಗ್ರಹಿಸಿದ್ದರು.

‘ರೈತರ ಪ್ರತಿಭಟನೆಗಳ ಸಂದರ್ಭ ದೋಸಾಂಜ್ ಹಲವಾರು ಸಲ ದೇಶವಿರೋಧಿ ಹೇಳಿಕೆಗಳನ್ನು ನೀಡಿದ್ದರು. ಅವರು ಖಾಲಿಸ್ಥಾನ್ ಬೆಂಬಲಿಗರೂ ಆಗಿದ್ದಾರೆ. ಇಂತಹ ವ್ಯಕ್ತಿ ಅಹಲ್ಯಾ ಮಾತೆಯ ನಗರದಲ್ಲಿ ಕಾರ್ಯಕ್ರಮ ನಡೆಸಲು ನಾವು ಅವಕಾಶ ನೀಡುವುದಿಲ್ಲ. ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಕೋರಿ ನಾವು ಆಡಳಿತಕ್ಕೆ ಅಹವಾಲು ಸಲ್ಲಿಸಿದ್ದೇವೆ. ಹಾಗಿದ್ದರೂ ಕಾರ್ಯಕ್ರಮ ನಡೆದರೆ ನಾವು ನಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸುತ್ತೇವೆ ’ ಎಂದು ಬಜರಂಗ ದಳದ ನಾಯಕ ಅವಿನಾಶ ಕೌಶಲ್ ಹೇಳಿದ್ದರು.

‘ನಮ್ಮ ಪ್ರತಿಭಟನೆಯು ಮಾದಕ ದ್ರವ್ಯಗಳ ವಿರುದ್ಧವಾಗಿದೆ,ನಾವು ಕಾರ್ಯಕ್ರಮಕ್ಕೆ ವಿರುದ್ಧವಾಗಿಲ್ಲ.ಇಂತಹ ಕಾರ್ಯಕ್ರಮಗಳಲ್ಲಿ ಮಾದಕ ದ್ರವ್ಯಗಳನ್ನು ಸೇವಿಸುವುದು ನಮ್ಮ ಸಂಸ್ಕೃತಿಯಲ್ಲ,ನಾವು ಅದಕ್ಕೆ ವಿರುದ್ಧವಾಗಿದ್ದೇವೆ. ಮದ್ಯಪಾನಕ್ಕೂ ನಾವು ವಿರುದ್ಧವಾಗಿದ್ದೇವೆ ಮತ್ತು ಈ ಕಾರ್ಯಕ್ರಮದಲ್ಲಿ ಅಂತಹ ಮಳಿಗೆಗಳಿದ್ದವು’ ಎಂದು ಇಂದೋರ ಬಜರಂಗ ದಳ ನಾಯಕ ತನ್ನು ಶರ್ಮಾ ಸುದ್ದಿಸಂಸ್ಥೆಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ದೋಸಾಂಜ್ ಬಜರಂಗ ದಳವನ್ನು ಪ್ರಸ್ತಾಪಿಸಲಿಲ್ಲ. ಆದರೆ ತನ್ನ ಕಾರ್ಯಕ್ರಮದ ಟಿಕೆಟ್‌ಗಳು ಕಾಳಸಂತೆಯಲ್ಲಿ ಮಾರಾಟವಾಗಿವೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು,ತಾನು ಅದಕ್ಕೆ ಹೇಗೆ ಹೊಣೆಗಾರ ಎಂದು ಜನರನ್ನು ಪ್ರಶ್ನಿಸಿದರು.

ಇದು ಭಾರತೀಯ ಸಂಗೀತದ ಕಾಲವಾಗಿದೆ ಮತ್ತು ಇಂತಹ ತೊಂದರೆಗಳು ನಿರೀಕ್ಷಿತವೇ ಆಗಿವೆ. ಇದು ಸ್ವತಂತ್ರ ಸಂಗೀತದ ಸಮಯವಾಗಿದೆ.

ವಿಕಸನವಾಗುವಾಗ ತೊಂದರೆಗಳು ಎದುರಾಗುತ್ತಲೇ ಇರುತ್ತವೆ. ಎಲ್ಲ ಸ್ವತಂತ್ರ ಕಲಾವಿದರೇ,ನಿಮ್ಮ ಪ್ರಯತ್ನಗಳನ್ನು ಇಮ್ಮಡಿಗೊಳಿಸಿ. ಇದು ಭಾರತೀಯ ಸಂಗೀತದ ಸಮಯ. ಹಿಂದೆ ವಿದೇಶಿ ಕಲಾವಿದರು ಬರುತ್ತಿದ್ದರು ಮತ್ತು ಅವರ ಟಿಕೆಟ್‌ಗಳು ಲಕ್ಷಗಳಲ್ಲಿ ಮಾರಾಟವಾಗುತ್ತಿದ್ದವು, ಈಗ ಭಾರತೀಯ ಕಲಾವಿದರ ಕಾರ್ಯಕ್ರಮಗಳ ಟಿಕೆಟ್‌ಗಳು ಬ್ಲ್ಯಾಕ್‌ನಲ್ಲಿ ಮಾರಾಟವಾಗುತ್ತಿವೆ. ಇದನ್ನೇ ‘ವೋಕಲ್ ಫಾರ್ ಲೋಕಲ್’ ಎಂದು ಕರೆಯಲಾಗುತ್ತದೆ ಎಂದು ದೋಸಾಂಜ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News