ಇಟಲಿಯಲ್ಲಿ ಮೃತಪಟ್ಟ ಭಾರತೀಯ ಯುವಕ: ನ್ಯಾಯದ ನಿರೀಕ್ಷೆಯಲ್ಲಿ ಕುಟುಂಬ

Update: 2024-06-26 10:21 GMT

ಭಟಿಂಡಾ: ಪಂಜಾಬ್ ನ ಮೋಗಾ ಜಿಲ್ಲೆಯ ಕೃಷಿಕೂಲಿ ಕಾರ್ಮಿಕ ಸಂತಮ್ ಸಿಂಗ್ (31) ಇಟಲಿಯಲ್ಲಿ ನಡೆದ ಅವಘಡದಲ್ಲಿ ಮೃತಪಟ್ಟಿದ್ದು, ಅವರ ಕುಟುಂಬ ಚಾಂದ್ ನಾವ್ ಗ್ರಾಮದಲ್ಲಿ ಮತ್ತು ಯುವಕನ ಮನೆಯಲ್ಲಿ ಶೋಕ ಮಡುಗಟ್ಟಿದೆ. ಆಘಾತ, ಆಕ್ರೋಶ ಮತ್ತು ಅಪನಂಬಿಕೆಯೊಂದಿಗೆ, ಯುವಕನ ಶವ ಮತ್ತು ನ್ಯಾಯದ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದೆ.

ಇಟಲಿಯ ರೋಮ್ ಬಳಿಯ ಲಝಿಯೊ ಎಂಬಲ್ಲಿ ಕೆಲಸದಲ್ಲಿದ್ದಾಗ ಯುವಕನ ಕೈ ಕತ್ತರಿಸಲ್ಪಟ್ಟಿದ್ದು, ಉದ್ಯೋಗದಾತ ಈತನ ಕೈಬಿಟ್ಟಿದ್ದರಿಂದ ಯುವಕ ಅತಂತ್ರನಾಗಿದ್ದ. ಗ್ರಾಮದ ಪುಟ್ಟ ಮನೆಯಲ್ಲಿ ವಾಸವಿರುವ ಬಡ ದಲಿತ ಕುಟುಂಬದಲ್ಲಿ, ಸಂತಮ್ ಅವರ ತಂದೆ ಗುರ್ಮುಖ್ ಸಿಂಗ್ ಮತ್ತು ತಾಯಿ ಜಸ್ಬೀರ್ ಕೌರ್, ಅಣ್ಣ ಅಮೃತಪಾಲ್ ಸಿಂಗ್ ಮತ್ತು ಅವಿವಾಹಿತ ಸಹೋದರಿಗೆ ಇಟಲಿಯಲ್ಲಿರುವ ಭಾರತೀಯರ ಸಂಘದಿಂದ ದೂರವಾಣಿ ಕರೆಗಳು ಪ್ರವಾಹದೋಪಾದಿಯಲ್ಲಿ ಬರುತ್ತಿವೆ. ನ್ಯಾಯ ಒದಗಿಸುವ ಭರವಸೆ ನೀಡಿದರೂ, ಇಟಲಿ ಅಥವಾ ಭಾರತ ಸರ್ಕಾರ ಇದುವರೆಗೆ ಕುಟುಂಬವನ್ನು ಸಂಪರ್ಕಿಸಿಲ್ಲ.

ಸಾಲ ಮಾಡಿ, ಟ್ರಾವೆಲ್ ಏಜೆಂಟರಿಗೆ ದುಬಾರಿ ಹಣ ತೆತ್ತು ಕಾನೂನುಬದ್ಧವಾಗಿ ವಿದೇಶಕ್ಕೆ ತೆರಳಿದ್ದರೂ ಸಂತಮ್ ಬಗೆಗಿನ ಇಂಥ ಅಮಾನವೀಯ ನಡವಳಿಕೆ ಕುಟುಂಬಕ್ಕೆ ಆಘಾತ ತಂದಿದೆ.

"ನಾಲ್ಕು ವರ್ಷ ಹಿಂದೆ ನಾವು ಸಂಬಂಧಿಕರಿಂದ ಸಾಲ ಪಡೆದು ಟ್ರಾವೆಲ್ ಏಜೆಂಟ್ ನೆರವಿನಿಂದ ಸಂತಮ್ ನನ್ನು ಇಟಲಿಗೆ ಕಳುಹಿಸಿದೆವು. ಸಂತಮ್ ತರಕಾರಿ ಬೆಳೆಯುವ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಆದರೆ ನಗರದ ಹೆಸರು ಗೊತ್ತಿಲ್ಲ. ನಾಲ್ಕು ವರ್ಷ ಪೂರ್ಣಗೊಳಿಸಿದ್ದರಿಂದ ಆತ ಅಲ್ಲಿನ ನಿವಾಸಿಯಾಗುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೂರ್ಣಗೊಳಿಸಿದ್ದ ಎಂಬ ನಂಬಿಕೆ ನಮ್ಮದು" ಎಂದು 10 ವರ್ಷಗಳನ್ನು ಸೌದಿ ಅರೇಬಿಯಾ ಮತ್ತು ಖತರ್‌ ನಲ್ಲಿ ಕಳೆದಿರುವ ಅಮೃತಪಾಲ್ ಹೇಳುತ್ತಾರೆ. ಅವರು ಸಹೋದರನ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರುವ ಪ್ರಯತ್ನದಲ್ಲಿದ್ದಾರೆ. ಇಟಲಿಯ ಕೆಲ ಮಂದಿಯ ಜತೆಗೆ ಸಂಪರ್ಕದಲ್ಲಿರುವ ಅವರು ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸುವ ಜತೆಗೆ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ನಡೆಸಲೂ ಸಜ್ಜಾಗುತ್ತಿದ್ದಾರೆ.

ಹೆವಿ ಕೃಷಿ ಯಂತ್ರದಿಂದ ಕೈ ತುಂಡರಿಸಲ್ಪಟ್ಟರೂ ಉದ್ಯೋಗದಾತ ಈತನನ್ನು ಕೈಬಿಡದೇ ಚಿಕಿತ್ಸೆ ಕೊಡಿಸಿದ್ದರೆ ಆತನ ಜೀವ ಉಳಿಯುತ್ತಿತ್ತು. ಇಂಥ ಮಾಲೀಕನ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವುದು ಅವರ ಆಗ್ರಹ. ಮಾಲೀಕ ಒಳ್ಳೆಯ ಚಿಕಿತ್ಸೆ ಕೊಡಿಸಲಿಲ್ಲ. ಆತನ ಕಾಲು ಕೂಡಾ ಮುರಿದಿತ್ತು. ಸಂತಮ್ ನನ್ನು ಕೂಡಿಹಾಕಿದ್ದ ಸ್ಥಳವನ್ನು ನೋಡಲು ಮತ್ತು ಮಾಲೀಕನನ್ನು ಭೇಟಿ ಮಾಡಲು ಪೋಷಕರನ್ನು ಅಲ್ಲಿಗೆ ಕರೆದೊಯ್ಯಲು ಉದ್ದೇಶಿಸಿದ್ದೇವೆ ಎಂದು ಅವರು ವಿವರಿಸಿದರು.

ಜೂನ್ 17ರಂದು ಆತನಿಗೆ ಗಾಯವಾಗಿದೆ ಎಂಬ ಮಾಹಿತಿ ನೀಡಲಾಗಿತ್ತು. ಬಳಿಕ 19ರಂದು ಆತನ ಸಾವಿನ ಸುದ್ದಿ ತಿಳಿಸಿದರು ಎಂದು ತಾಯಿ ಜಸ್ಬೀರ್ ಕೌರ್ ಹೇಳಿದ್ದಾರೆ. ಸಂತಮ್ ನ ಪತ್ನಿ ಎಂದು ಇಟಲಿ ಮಾಧ್ಯಮದಲ್ಲಿ ಉಲ್ಲೇಖಿಸಿರುವ ಮಹಿಳೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಿವಾಹದ ಬಗ್ಗೆ ಆತ ಎಂದೂ ಹೇಳಿಲ್ಲ. ಬಹುಶಃ ಲಿವ್ ಇನ್ ಸಂಬಂಧ ಹೊಂದಿದ್ದಿರಬೇಕು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News