ವಿಶ್ವದ ಅತ್ಯಂತ ಕೆಟ್ಟ ವಿಮಾನಯಾನ ಸಂಸ್ಥೆಗಳ ಸಾಲಿನಲ್ಲಿ ʼಇಂಡಿಗೋʼ!

Update: 2024-12-05 06:45 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ʼಇಂಡಿಗೋʼ ವಿಮಾನಯಾನ ಸಂಸ್ಥೆ ʼವಿಶ್ವದ ಅತ್ಯಂತ ಕೆಟ್ಟ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆʼ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಆದರೆ, ಸಮೀಕ್ಷಾ ವರದಿಯನ್ನು ಇಂಡಿಗೋ ತಿರಸ್ಕರಿಸಿದ್ದು, ಸಮೀಕ್ಷೆಯ ಪಾರದರ್ಶಕತೆಯನ್ನು ಪ್ರಶ್ನಿಸಿದೆ.

2024ರ ʼಏರ್ ಹೆಲ್ಪ್ ಸ್ಕೋರ್ ವರದಿʼಯು(AirHelp Score report) ಇಂಡಿಗೋ "ವಿಶ್ವದ ಅತ್ಯಂತ ಕೆಟ್ಟ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದ್ದು, 4.80 ಅಂಕಗಳೊಂದಿಗೆ 109 ವಿಮಾನಯಾನ ಸಂಸ್ಥೆಗಳಲ್ಲಿ 103ನೇ ಸ್ಥಾನ ಪಡೆದುಕೊಂಡಿದೆ ಎಂದು ಸಮೀಕ್ಷೆಯು ತಿಳಿಸಿದೆ.

ಗ್ರಾಹಕರ ತೃಪ್ತಿ, ವಿಮಾನದಲ್ಲಿನ ಅಡೆತಡೆಗಳು, ಕಳಪೆ ನಿರ್ವಹಣೆಯು ಇಂಡಿಗೋ ವಿಮಾನಯಾನ ಸಂಸ್ಥೆ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಕಾರಣ ಎನ್ನಲಾಗಿದೆ. ʼAirHelpʼ ಸಮೀಕ್ಷೆಯಲ್ಲಿ ಜಾಗತಿಕವಾಗಿ ವಿಮಾನಯಾನ ಸಂಸ್ಥೆಗಳ ಸಮಯಪ್ರಜ್ಞೆ, ಸೇವೆಯ ಗುಣಮಟ್ಟ ಮತ್ತು ಪರಿಹಾರದ ಕ್ರಮಗಳ ನಿರ್ವಹಣೆಯ ಬಗ್ಗೆ ಮೌಲ್ಯಮಾಪನ ಮಾಡಲಾಗಿದೆ. ವಿಶ್ಲೇಷಣೆಯು 2024ರ ಜನವರಿಯಿಂದ ಅಕ್ಟೋಬರ್ ವರೆಗಿನ ಡೇಟಾವನ್ನು ಒಳಗೊಂಡಿದೆ. ವಿಮಾನಯಾನ ಸಂಸ್ಥೆಯ ಕಾರ್ಯಕ್ಷಮತೆ, ಗ್ರಾಹಕರ ಪ್ರತಿಕ್ರಿಯೆ ಮತ್ತು ಆಹಾರ, ಸೌಕರ್ಯ ಮತ್ತು ಸೇವೆಯ ಕುರಿತು 54 ದೇಶಗಳ ಪ್ರಯಾಣಿಕರಿಂದ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಲಾಗಿದೆ.

AirHelp ಸಿಇಒ ಟೊಮಾಸ್ಜ್ ಪಾವ್ಲಿಸ್ಜಿನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಮೀಕ್ಷೆಯು, ಪ್ರಯಾಣಿಕರ ಪ್ರತಿಕ್ರಿಯೆಯ ಬಗ್ಗೆ ನಿರಂತರವಾಗಿ ಗಮನಹರಿಸುವಂತೆ ವಿಮಾನಯಾನ ಸಂಸ್ಥೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ಬ್ರಸೆಲ್ಸ್ ಏರ್ ಲೈನ್ಸ್(Brussels Airlines) 8.12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ, ಕತಾರ್ ಏರ್ ವೇಸ್ (Qatar Airways) 8.11 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿ ಮತ್ತು ಯುನೈಟೆಡ್ ಏರ್ಲೈನ್ಸ್( United Airlines) 8.04 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿವೆ. ಏರ್ ಇಂಡಿಯಾ 6.15 ಅಂಕಗಳೊಂದಿಗೆ 61 ನೇ ಸ್ಥಾನದಲ್ಲಿದೆ. ಟ್ಯುನಿಸೈರ್(Tunisair) ವಿಮಾನಯಾನ ಸಂಸ್ಥೆ ಕೊನೆಯ ಸ್ಥಾನ ಅಂದರೆ 109ನೇ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.

ಸಮೀಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ʼಇಂಡಿಗೋʼ ವಿಮಾನಯಾನ ಸಂಸ್ಥೆ ಸಮೀಕ್ಷೆಯ ಪಾರದರ್ಶಕತೆಯನ್ನು ಪ್ರಶ್ನಿಸಿದೆ. ವಿಶ್ವದ ಅತ್ಯಂತ ಕೆಟ್ಟ ವಿಮಾನಯಾನ ಸಂಸ್ಥೆಗಳ ಸಾಲಿನಲ್ಲಿ ಸ್ಥಾನ ಪಡೆದ ಸಮೀಕ್ಷೆಯನ್ನು ನಿರಾಕರಿಸಿದ್ದು, ವಿಮಾನಯಾನ ಸಂಸ್ಥೆಯು ಸ್ಥಿರವಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News