ಅಕ್ರಮ ವಲಸಿಗರ ಮಾಹಿತಿ ಸಂಗ್ರಹ ಅಸಾಧ್ಯ ; ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರಕಾರ ಮಾಹಿತಿ

Update: 2023-12-12 17:20 GMT

Supreme Court | Photo: PTI 

ಹೊಸದಿಲ್ಲಿ: ವಿದೇಶಿ ಪ್ರಜೆಗಳ ಪ್ರವೇಶವು ರಹಸ್ಯವಾಗಿರುವುದರಿಂದ ದೇಶದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಅಕ್ರಮ ವಲಸಿಗರ ಕುರಿತು ದತ್ತಾಂಶವನ್ನು ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಮಂಗಳವಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.

ಅಸ್ಸಾಂನಲ್ಲಿ ಅಕ್ರಮ ವಲಸಿಗರಿಗೆ ಸಂಬಂಧಿಸಿದ ಪೌರತ್ವ ಕಾಯ್ದೆಯ ಸೆಕ್ಷನ್ 6ಎಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಅಫಿಡಾವಿಟ್ ಸಲ್ಲಿಸಿದೆ. ಅದರಲ್ಲಿ ಸೆಕ್ಷನ್ 6ಎ ಅಡಿಯಲ್ಲಿ 17,861 ಜನರಿಗೆ ಪೌರತ್ವ ನೀಡಲಾಗಿದೆ ಎಂದು ಹೇಳಿದೆ.

ಡಿಸೆಂಬರ್ 7ರಂದು ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರಕಾರ, 1966-1971ರ ಅವಧಿಗೆ ಸಂಬಂಧಿಸಿ ವಿದೇಶಿ ನ್ಯಾಯಾಧಿಕರಣ ನೀಡಿದ ಆದೇಶದ ಅಡಿಯಲ್ಲಿ 32,381 ಜನರನ್ನು ವಿದೇಶಿಯರೆಂದು ಪತ್ತೆ ಮಾಡಲಾಗಿದೆ ಎಂದು ಹೇಳಿದೆ.

1971 ಮಾರ್ಚ್ 25ರ ನಂತರ ಭಾರತ ಪ್ರವೇಶಿಸಿದ ಅಕ್ರಮ ವಲಸಿಗರ ಸಂಖ್ಯೆ ಕುರಿತ ನ್ಯಾಯಾಲಯದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸರಕಾರ, ಅಕ್ರಮ ವಲಸಿಗರು ಪ್ರಯಾಣ ದಾಖಲೆಗಳಿಲ್ಲದೆ ರಹಸ್ಯವಾಗಿ ದೇಶ ಪ್ರವೇಶಿಸುತ್ತಿದ್ದಾರೆ ಎಂದು ತಿಳಿಸಿತು.

ದೇಶದಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವವ ವಿದೇಶಿ ಪ್ರಜೆಗಳನ್ನು ಗುರುತಿಸುವ, ಬಂಧಿಸುವ ಹಾಗೂ ಅವರನ್ನು ವಾಪಸ್ ಅವರ ದೇಶಕ್ಕೆ ಕಳುಹಿಸುವ ಕೆಲಸ ಸಂಕೀರ್ಣವಾದುದು. ಆ ಕೆಲಸ ನಡೆಯುತ್ತಿರುತ್ತದೆ.

2017ರಿಂದ 2022ರ ವರೆಗೆ 14,346 ವಿದೇಶಿ ಪ್ರಜೆಗಳನ್ನು ಅವರ ದೇಶಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ಕೇಂದ್ರ ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಕೆಲವು ಅಂಕಿ-ಅಂಶಗಳನ್ನು ನೀಡಿದ ಕೇಂದ್ರ ಸರಕಾರ ಅಸ್ಸಾಂನಲ್ಲಿ ಪ್ರಸಕ್ತ 100 ವಿದೇಶಿ ನ್ಯಾಯಾಧಿಕರಣಗಳು ಕಾರ್ಯ ನಿರ್ವಹಿಸುತ್ತಿವೆ. 2023 ಅಕ್ಟೋಬರ್ 31ರ ವರೆಗೆ 3.34 ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಅಕ್ಟೋಬರ್ 31ರ ವರೆಗೆ 7,714 ಪ್ರಕರಣಗಳು ವಿಲೇವಾರಿಗೆ ಬಾಕಿ ಉಳಿದಿವೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News