ಮುಸ್ಲಿಮ್ ವೈಯಕ್ತಿಕ ಕಾನೂನಿನಡಿ ಅಂತರಧರ್ಮೀಯ ಮದುವೆ ಮಾನ್ಯವಲ್ಲ : ಮಧ್ಯಪ್ರದೇಶ ಹೈಕೋರ್ಟ್
ಭೋಪಾಲ : ಮುಸ್ಲಿಮ್ ಪುರುಷ ಮತ್ತು ಹಿಂದು ಮಹಿಳೆಯ ನಡುವೆ ಮದುವೆಯು ವಿಶೇಷ ವಿವಾಹ ಕಾಯ್ದೆಯಡಿ ನೋಂದಣಿಯಾಗಿದ್ದರೂ ಅದು ಮುಸ್ಲಿಮ್ ವೈಯಕ್ತಿಕ ಕಾನೂನಿನಡಿ ಮಾನ್ಯವಲ್ಲ ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ. ಇದೇ ವೇಳೆ ಅಂತರಧರ್ಮೀಯ ಜೋಡಿಗೆ ಪೋಲಿಸ್ ರಕ್ಷಣೆಯನ್ನು ಒದಗಿಸಲು ಅದು ನಿರಾಕರಿಸಿದೆ.
ಪೋಲಿಸ್ ರಕ್ಷಣೆಯನ್ನು ಕೋರಿ ಜೋಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಜಿ.ಎಸ್.ಅಹ್ಲುವಾಲಿಯಾ ಅವರು, ವಿಗ್ರಹಾರಾಧಕ ಅಥವಾ ಅಗ್ನಿ ಆರಾಧಕ ಮಹಿಳೆಯೊಂದಿಗೆ ಮುಸ್ಲಿಮ್ ಪುರುಷನ ಮದುವೆಯನ್ನು ಮುಸ್ಲಿಮ್ ಕಾನೂನು ಅನುಮತಿಸುವುದಿಲ್ಲ ಎಂದು ಹೇಳಿದರು.
ವರ ಮತ್ತು ವಧು ವಿಭಿನ್ನ ಧರ್ಮಗಳಿಗೆ ಸೇರಿದ್ದರೂ ಅವರ ಮದುವೆಗೆ ಅವಕಾಶ ನೀಡುವ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಲು ತಾವು ಬಯಸಿದ್ದೇವೆ, ಆದರೆ ತಮ್ಮ ಕುಟುಂಬಗಳಿಂದ ಬೆದರಿಕೆಗಳಿಂದಾಗಿ ಅದು ಸಾಧ್ಯವಾಗುತ್ತಿಲ್ಲ ಎಂದು ಸಫೀ ಖಾನ್ ಮತ್ತು ಸಾರಿಕಾ ಸೇನ್ ನ್ಯಾಯಾಲಯಕ್ಕೆ ತಿಳಿಸಿದರು. ವಿವಾಹ ನೋಂದಣಾಧಿಕಾರಿಗಳ ಮುಂದೆ ತಮ್ಮ ಸುರಕ್ಷಿತ ಹಾಜರಾತಿಗಾಗಿ ಭದ್ರತೆ ಮತ್ತು ತಮ್ಮ ಕುಟುಂಬಗಳು ದಾಖಲಿಸಬಹುದಾದ ಅಪಹರಣದಂತಹ ಯಾವುದೇ ಕ್ರಿಮಿನಲ್ ಆರೋಪಗಳಿಂದ ರಕ್ಷಣೆ ಒದಗಿಸುವಂತೆ ಅವರು ಕೋರಿಕೊಂಡರು.
ತಾವು ಮತಾಂತರಗೊಳ್ಳುವುದಿಲ್ಲ ಮತ್ತು ವಿಶೇಷ ವಿವಾಹ ಕಾಯ್ದೆಯಡಿ ತಮ್ಮ ಮದುವೆಯು ಮುಸ್ಲಿಮ್ ವೈಯಕ್ತಿಕ ಕಾನೂನಿನಡಿ ನಿರ್ಬಂಧಗಳನ್ನು ತಳ್ಳಿ ಹಾಕುತ್ತದೆ. ಸಾರಿಕಾ ಹಿಂದು ಆಗಿ ಮತ್ತು ಸಫೀ ಮುಸ್ಲಿಮ್ ಆಗಿ ಉಳಿಯುತ್ತಾರೆ ಮತ್ತು ಪರಸ್ಪರರ ಧರ್ಮಾಚರಣೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.
ಜೋಡಿಯ ಅರ್ಜಿಯನ್ನು ವಿರೋಧಿಸಿದ ಸಾರಿಕಾ ಕುಟುಂಬವು, ಅವಳು ಕುಟುಂಬದ ಚಿನ್ನಾಭರಣಗಳು ಮತ್ತು ನಗದು ಹಣದೊಂದಿಗೆ ಓಡಿ ಹೋಗಿದ್ದಾಳೆ ಮತ್ತು ಅವರ ಅಂತರಧರ್ಮೀಯ ಮದುವೆಯು ಅವರ ವಿರುದ್ಧ ಸಾಮಾಜಿಕ ಬಹಿಷ್ಕಾರಕ್ಕೆ ಕಾರಣವಾಗುತ್ತದೆ ಎಂದು ಹೇಳಿತು.
ಉಭಯ ಕಡೆಗಳ ವಾದವಿವಾದಗಳನ್ನು ಆಲಿಸಿದ ಮತ್ತು ಸಂಬಂಧಿಸಿದ ಪೂರ್ವ ನಿದರ್ಶನಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯವು ಮುಸ್ಲಿಮ್ ಪುರುಷ ಮತ್ತು ವಿಗ್ರಹಾರಾಧಕ ಮಹಿಳೆಯ ನಡುವೆ ಮದುವೆಯು ವಿಶೇಷ ವಿವಾಹ ಕಾಯ್ದೆಯಡಿ ನೋಂದಣಿಯಾಗಿದ್ದರೂ ಅಕ್ರಮವಾಗುತ್ತದೆ ಎಂದು ಹೇಳಿತು.