ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ | ಸುಪ್ರೀಂ ಕೋರ್ಟ್ ತೀರ್ಪಿಗೆ ಮಾಯಾವತಿ ವಿರೋಧ
ಲಕ್ನೋ : ಪರಿಶಿಷ್ಟ ಜಾತಿ(ಎಸ್‌ಸಿ)ಗಳಲ್ಲಿ ಒಳ ಮೀಸಲಾತಿಗೆ ಅವಕಾಶ ಕಲ್ಪಿಸಿರುವ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪಿಗೆ ತನ್ನ ಪಕ್ಷದ ವಿರೋಧವನ್ನು ರವಿವಾರ ವ್ಯಕ್ತಪಡಿಸಿದ ಬಿಎಸ್‌ಪಿ ಮುಖ್ಯಸ್ಥೆ ಹಾಗೂ ಉ.ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರು, ನ್ಯಾಯಾಲಯದ ನಿರ್ಧಾರವು ಯಾವುದೇ ಮಾನದಂಡಗಳನ್ನು ನಿಗದಿಗೊಳಿಸಿಲ್ಲ, ಹೀಗಾಗಿ ಅದು ಅಸ್ಪಷ್ಟವಾಗಿದೆ ಎಂದು ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಎಸ್‌ಸಿ ಮತ್ತು ಎಸ್‌ಟಿಗಳಲ್ಲಿ ಒಳ ಮೀಸಲಾತಿಗೆ ಅನುಮತಿಸಲಾಗಿದೆ. ನಮ್ಮ ಪಕ್ಷವು ಎಂದಿಗೂ ಇದನ್ನು ಒಪ್ಪುವುದಿಲ್ಲ. ಏಕೆಂದರೆ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳು ತಮ್ಮ ವಿರುದ್ಧದ ದೌರ್ಜನ್ಯಗಳನ್ನು ಒಂದು ಗುಂಪಾಗಿ ಎದುರಿಸಿವೆ ಮತ್ತು ಈ ಗುಂಪು ಸಮಾನವಾಗಿದ್ದು, ಅದರಲ್ಲಿ ಯಾವುದೇ ಉಪ-ವರ್ಗೀಕರಣವನ್ನು ಮಾಡುವುದು ಸರಿಯಲ್ಲ’ ಎಂದು ಹೇಳಿದರು.
ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡ ಮಾಯಾವತಿ, ಮೀಸಲಾತಿಯನ್ನು ರದ್ದುಗೊಳಿಸಿದರೆ ಕೋಟ್ಯಂತರ ದಲಿತರು ಮತ್ತು ಆದಿವಾಸಿಗಳಿಗೆ ತುಂಬ ಕಷ್ಟವಾಗುತ್ತದೆ ಎಂದರು.
ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಲ್ಲಿ ಶೇ.10 ಅಥವಾ ಶೇ.11ರಷ್ಟು ಜನರು ಮಾತ್ರ ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದು ಪ್ರತಿಪಾದಿಸಿದ ಅವರು,ಉಳಿದ ಶೇ.90ರಷ್ಟು ಜನರ ಸ್ಥಿತಿ ದಯನೀಯವಾಗಿದೆ ಎಂದು ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪರಿಗಣಿಸಿದರೆ ಈ ಶೇ.90ರಷ್ಟು ಎಸ್‌ಸಿಗಳು ಮತ್ತು ಎಸ್‌ಟಿಗಳು ಹಿಂದೆ ಬೀಳುತ್ತಾರೆ ಎಂದರು.
ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ ಅವರು,ಎಸ್‌ಸಿ-ಎಸ್‌ಟಿ ಸಮುದಾಯವನ್ನು ಬೆಂಬಲಿಸುವುದಾಗಿ ಹೇಳಿಕೊಳ್ಳುವ ಕೇಂದ್ರ ಮತ್ತು ಬಿಜೆಪಿ ಅವರ ಪರವಾಗಿ ಸರಿಯಾದ ವಕಾಲತ್ತು ವಹಿಸಬೇಕು. ಆದರೆ ಅವರು ಅದನ್ನು ಮಾಡಲಿಲ್ಲ. ಕಾಂಗ್ರೆಸ್ ಕೂಡ ಈ ವಿಷಯದಲ್ಲಿ ಅಸ್ಪಷ್ಟ ಧೋರಣೆಯನ್ನು ಹೊಂದಿದೆ ಎಂದರು.
ಕೇಂದ್ರದ ಬಿಜೆಪಿ ಸರಕಾರದ ಉದ್ದೇಶ ಸ್ಪಷ್ಟವಾಗಿದ್ದರೆ ಅದು ಸಂಸತ್ತಿನಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡಬೇಕು ಮತ್ತು ತಿದ್ದುಪಡಿಯನ್ನು ಒಂಭತ್ತನೇ ಅನುಸೂಚಿಯಲ್ಲಿ ಸೇರಿಸಬೇಕು ಎಂದು ಹೇಳಿದ ಮಾಯಾವತಿ,ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ತಾನು ಒಪ್ಪುವುದಿಲ್ಲ. ಏಕೆಂದರೆ ಅದನ್ನು ರದ್ದುಗೊಳಿಸುವ ಹಕ್ಕು ಕೂಡ ಸಂಸತ್ತಿಗಿದೆ. ಅವರು ಅದನ್ನು ರದ್ದುಗೊಳಿಸದಿದ್ದರೆ ಅದು ಕಾಂಗ್ರೆಸ್, ಬಿಜೆಪಿ ಅಥವಾ ಇತರ ಪಕ್ಷವಾಗಿರಲಿ...ಎಸ್‌ಸಿಗಳು, ಎಸ್‌ಟಿಗಳು ಮತ್ತು ಒಬಿಸಿಗಳ ವಿಷಯದಲ್ಲಿ ಅವರ ಉದ್ದೇಶಗಳು ಸ್ಪಷ್ಟವಾಗಿಲ್ಲ ಎಂದಾಗುತ್ತದೆ ಎಂದರು.
ಎಸ್‌ಸಿ-ಎಸ್‌ಟಿಗಳು ಪಡೆದಿರುವ ಮೀಸಲಾತಿಯು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಪರಿಹರಿಸುವುದನ್ನು ಆಧರಿಸಿದೆ. ಅವರ ಕುರಿತು ಸಾಮಾಜಿಕ ದೃಷ್ಟಿಕೋನ ಬದಲಾಗಿಲ್ಲ. ಹೀಗಾಗಿ ಮೀಸಲಾತಿ ಪಡೆಯುವುದು ಅವರಿಗೆ ಮಹತ್ವದ್ದಾಗಿದೆ ಎಂದು ಮಾಯಾವತಿ ನುಡಿದರು.