ಇಂಟರ್ನೆಟ್ ಸ್ಥಗಿತ: ಭಾರತದ ಆರ್ಥಿಕತೆಗೆ 1.9 ಶತಕೋಟಿ ಡಾಲರ್ ನಷ್ಟ
ಮುಂಬೈ: ಮಣಿಪುರ ಹಾಗೂ ಪಂಜಾಬ್ ನಂತಹ ರಾಜ್ಯಗಳಲ್ಲಿ ಕಾನೂನು ಜಾರಿ ಏಜೆನ್ಸಿಗಳು ಇಂಟರ್ನೆಟ್ ಸ್ಥಗಿತಗೊಳಿಸಿದ್ದರ ಪರಿಣಾಮವಾಗಿ 2023ರ ಮೊದಲಾರ್ಧದಲ್ಲಿ ಭಾರತದ ಆರ್ಥಿಕತೆಗೆ 1.9 ಶತಕೋಟಿ ಡಾಲರ್ ನಷ್ಟವಾಗಿರುವುದಾಗಿ ವರದಿಯೊಂದು ತಿಳಿಸಿದೆ.
ಇಂಟರ್ನೆಟ್ ಶಟ್ ಡೌನ್ ನಿಂದಾಗಿ ಸುಮಾರು 118 ದಶಲಕ್ಷ ಡಾಲರ್ ಮೌಲ್ಯದ ವಿದೇಶಿ ಹೂಡಿಕೆ ನಷ್ಟವಾಗಿದೆ ಹಾಗೂ 21 ಸಾವಿರಕ್ಕೂ ಅಧಿಕ ಉದ್ಯೋಗಗಳು ಕಳೆದುಹೋಗಿವೆೆ ಎಂದು ಜಾಗತಿಕಮಟ್ಟದ ಲಾಭೋದ್ದೇಶ ರಹಿತ ಸಂಸ್ಥೆ ‘ಇಂಟರ್ನೆಟ್ ಸೊಸೈಟಿ’ಯು ನೆಟ್ಲಾಸ್ ಎಂಬ ಶೀರ್ಷಿಕೆಯ ವರದಿಯಲ್ಲಿ ತಿಳಿಸಿದೆ.
ಈ ವರದಿಯು, ಇಂಟರ್ನೆಟ್ ಸ್ಥಾಗಿತ್ಯದಿಂದಾಗಿ ಉಂಟಾಗುವ ಆರ್ಥಿಕ ಪರಿಣಾಮಗಳ ಜೊತೆಗೆ ಉದ್ಯೋಗ ದರದಲ್ಲಿ ಬದಲಾವಣೆ, ವಿದೇಶಿ ನೇರ ಹೂಡಿಕೆ(FDI) ನಷ್ಟ, ಭವಿಷ್ಯದಲ್ಲಿ ಇಂಟರ್ನೆಟ್ ಶಟ್ಡೌನ್ಗಳಿಂದಾಗುವ ಆಪಾಯ ಹಾಗೂ ಉದ್ಯೋಗ ನಿರತರ ಜನಸಂಖ್ಯೆಯ ಮೇಲಿನ ಪರಿಣಾಮ ಇತ್ಯಾದಿಗಳ ಬಗ್ಗೆಯೂ ಅಧ್ಯಯನ ನಡೆಸಿದೆ.
ಇಂಟರ್ನೆಟ್ ಸಂಪರ್ಕ ಸ್ಥಗಿತಗೊಳಿಸುವ ಮೂಲಕ ಗಲಭೆಯನ್ನು ಶಮನಗೊಳಿಸಬಹುದು, ತಪ್ಪು ಮಾಹಿತಿ ಹರಡದಂತೆ ತಡೆಯಬಹುದು ಹಾಗೂ ಸೈಬರ್ ಸುರಕ್ಷತೆಯ ಮೇಲಿನ ಬೆದರಿಕೆಯನ್ನು ‘‘ಕಡಿಮೆಗೊಳಿಸಬಹುದು ಎಂಬುದಾಗಿ ಸರಕಾರಗಳು ತಪ್ಪು ನಂಬಿಕೆಯನ್ನು ಹೊಂದಿವೆ. ಆದರೆ ಇಂಟರ್ನೆಟ್ ಶಟ್ಡೌನ್ಗಳು ಆರ್ಥಿಕ ಚಟುವಟಿಕೆಗೆ ತೀವ್ರವಾಗಿ ಅಡಚಣೆಯುಂಟು ಮಾಡುವಂತಹವಾಗಿವೆ ’’ ಎಂದು ವರದಿ ತಿಳಿಸಿದೆ.
ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಲು ಇಂಟರ್ನೆಟ್ ಶಟ್ಡೌನ್ ಮಾಡುವ ಭಾರತ ಸರಕಾರದ ಕ್ರಮದಿಂದಾಗಿ ಈವರೆಗೆ ದೇಶದಲ್ಲಿ ಶಟ್ಡೌನಂ ಸಾಧ್ಯತೆಯ ಅಪಾಯ ಶೇ.16ರಷ್ಟಿದ್ದು ಇದು ಜಗತ್ತಿನಲ್ಲೇ ಅತ್ಯಧಿಕವೆಂದು ವರದಿ ಹೇಳಿದೆ.
ಇಂಟರ್ನೆಟ್ ಶಟ್ಡೌನ್ಗಳಿಂದಾಗಿ ಇಕಾಮರ್ಸ್ ಸ್ಥಗಿತಗೊಳ್ಳುತ್ತದೆ, ಸಮಯಸಂವೇದಿ ವಹಿವಾಟುಗಳಲ್ಲಿ ನಷ್ಟವುಂಟು ಮಾಡುತ್ತವೆ, ಉದ್ಯಮಿ-ಗ್ರಾಹಕ ಸಂವಹನಕ್ಕೆ ಅಡ್ಡಿಪಡಿಸುತ್ತದೆ ಹಾಗೂ ಕಂಪೆನಿಗಳ ಆರ್ಥಿಕತೆಯನ್ನು ಹಾಗೂ ಪ್ರತಿಷ್ಠೆಯನ್ನು ಅಪಾಯಕ್ಕೊಡುತ್ತವೆ ಎಂದು ವರದಿ ಹೇಳಿದೆ.