ರಾಮಮಂದಿರದ ಕಾಮಗಾರಿ ಪೂರ್ಣವಾಗಲು ಇನ್ನೂ 2 ವರ್ಷ ಬೇಕು : ಪೇಜಾವರ ಶ್ರೀ
Update: 2024-03-11 17:03 GMT
ಹೊಸದಿಲ್ಲಿ : ‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣದ ಕಾಮಗಾರಿಗಳು ಪೂರ್ಣವಾಗಲು ಇನ್ನೂ ಎರಡು ವರ್ಷ ಬೇಕು’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ದಿಲ್ಲಿಯ ಪೇಜಾವರ ಮಠದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ 48 ದಿನ ಮಂಡಲೋತ್ಸವದೊಂದಿಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ರವಿವಾರ ಸರಯೂ ನದಿಯಲ್ಲಿ ಅವಭೃತ ಸ್ನಾನದ ಮೂಲಕ ಪೂರ್ಣಗೊಂಡಿತು’ ಎಂದರು.
‘ಈಗ ಶ್ರೀರಾಮನಿಗೆ ಸೂರು ಕಟ್ಟಿಕೊಟ್ಟಿದ್ದೇವೆ. ರಾಮನ ಜನ್ಮ ಸ್ಥಳದಲ್ಲಿಯೇ ಅವನ ದರ್ಶನ ಭಾಗ್ಯ ಸಿಗುತ್ತಿದೆ. ಈ ಹೊತ್ತಿನಲ್ಲಿ ರಾಮರಾಜ್ಯದ ಪರಿಕಲ್ಪನೆಯನ್ನು ನಾವು ವಾಸ್ತವಿಕವಾಗಿ ಅರ್ಥಮಾಡಿಕೊಳ್ಳಬೇಕು. ಕಷ್ಟದಲ್ಲಿರುವವರಿಗೆ ನೆರವಾಗುವ ಗುಣ ಬೆಳೆಸಿಕೊಳ್ಳಬೇಕು’ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಲಹೆ ನೀಡಿದ್ದಾರೆ.