ವಿವಿಪ್ಯಾಟ್‌ಗಳ ಕುರಿತು ಅಭಿಪ್ರಾಯ ಸಲ್ಲಿಸಲು ಭೇಟಿಗೆ ಅವಕಾಶ ಕೋರಿ ಇಂಡಿಯಾ ಮೈತ್ರಿಕೂಟದಿಂದ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ

Update: 2024-01-02 09:35 GMT

ಜೈರಾಂ ರಮೇಶ್‌ (PTI)

ಹೊಸದಿಲ್ಲಿ: ವಿವಿಪ್ಯಾಟ್‌ಗಳ ಬಗ್ಗೆ ತಮ್ಮ ಅಭಿಪ್ರಾಯ ಮುಂದಿಡಲು ಇಂಡಿಯಾ ಮೈತ್ರಿಕೂಟದ ಮುಖಂಡರಿಗೆ ಅವಕಾಶ ಒದಗಿಸಬೇಕೆಂದು ಕೋರಿ ಹಿರಿಯ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಅವರು ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್‌ ಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರ ಭೇಟಿಗೆ ಅವಕಾಶ ಕೋರಿ ಇಂಡಿಯಾ ಮೈತ್ರಿಕೂಟದ ಸದಸ್ಯರು ರಾಜೀವ್‌ ಕುಮಾರ್‌ ಅವರಿಗೆ ಡಿಸೆಂಬರ್‌ 30ರಂದು ಪತ್ರ ಬರೆದಿದ್ದಾರೆ. ಮೈತ್ರಿಕೂಟದ ಸಭೆಯಲ್ಲಿ ಮುಂದಿಡಲಾದ ವಿವಿಪ್ಯಾಟ್‌ ಕುರಿತ ಸಲಹೆಗಳ ಬಗ್ಗೆ ಚರ್ಚಿಸಲು ಅವಕಾಶವನ್ನೂ ಅವರು ಈ ಪತ್ರದಲ್ಲಿ ಕೋರಿದ್ದಾರೆ.

“ನಾವು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿಯಾಗಿ ಸಭೆಯ ನಿರ್ಣಯದ ಪ್ರತಿಯನ್ನು ಅವರಿಗೆ ಒದಗಿಸಲು ಯತ್ನಿಸುತಿದ್ದರೂ ಇನ್ನೂ ಯಶಸ್ವಿಯಾಗಿಲ್ಲ ಎಂದು ಜೈರಾಂ ರಮೇಶ್‌ ಹೇಳಿದ್ದಾರೆ.

“ಮೈತ್ರಿಕೂಟದ ಮುಖಂಡರಿಗೆ ಮುಖ್ಯ ಚುನಾವಣಾ ಆಯುಕ್ತರು ಮತ್ತವರ ಸಹೋದ್ಯೋಗಿಗಳನ್ನು ಭೇಟಿಯಾಗಲು ಅವಕಾಶ ನೀಡಲು ಮತ್ತೊಮ್ಮೆ ವಿನಂತಿಸುತ್ತಿದ್ದೇವೆ ಹಾಗೂ ಇವಿಎಂ ಸಂಬಂಧಿತ ಕೆಲವೊಂದು ಕಾಳಜಿಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ,” ಎಂದು ಜೈರಾಂ ರಮೇಶ್‌ ಹೇಳಿದ್ದಾರೆ.

ಈ ಕುರಿತಂತೆ ಕಳೆದ ವರ್ಷದ ಆಗಸ್ಟ್‌ 9ರಂದು ಒಂದು ಮನವಿ ಸಲ್ಲಿಸಲಾಗಿತ್ತು ಹಾಗೂ ನಂತರದ ಹಲವು ಸಭೆಗಳಲ್ಲಿಯೂ ಚರ್ಚಿಸಲಾಗಿತ್ತು. ಇದಕ್ಕೆ ಸಾಮಾನ್ಯ ಉತ್ತರವನ್ನು ಆಗಸ್ಟ್‌ 23ರಂದು ನೀಡಿದ್ದ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿರುವ ಇವಿಎಂ ಕುರಿತಾದ ಎಫ್‌ಎಕ್ಯುಗಳನ್ನು ಓದುವಂತೆ ಸೂಚಿಸಿತ್ತು. ಆದರೆ ಭೇಟಿಗೆ ಅವಕಾಶ ಕಲ್ಪಿಸಿಲ್ಲ ಎಂದು ಅವರು ಹೇಳಿದ್ದಾರೆ.

ಇತ್ತೀಚಿಗಿನ ಇಂಡಿಯಾ ಮೈತ್ರಿಕೂಟ ಸಭೆಯಲ್ಲಿ ಇವಿಎಂಗಳ ಬಗ್ಗೆ ಸಂಶಯ ವ್ಯಕ್ತಪಡಿಸಿ ವಿವಿಪ್ಯಾಟ್‌ ಸ್ಲಿಪ್‌ಗಳನ್ನು ಮತದಾರರಿಗೆ ನೀಡಬೇಕು ಹಾಗೂ ನಂತರ ವಿವಿಪ್ಯಾಟ್‌ ಸ್ಲಿಪ್‌ಗಳ ಶೇ100ರಷ್ಟು ಎಣಿಕೆ ನಡೆಯಬೇಕು ಎಂದು ಸಲಹೆ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News