ಜಮ್ಮು ಕಾಶ್ಮೀರ: ಸಿಎಂ ಉಮರ್ ಅಬ್ದುಲ್ಲಾ ಸಂಪುಟದಲ್ಲಿ ಐದು ಮಂದಿ ಸಚಿವರು

Update: 2024-10-16 09:39 GMT

ಉಮರ್ ಅಬ್ದುಲ್ಲಾ | PC : ANI

ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಬುಧವಾರ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

2019 ರಲ್ಲಿ ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಉಮರ್ ಅಬ್ದುಲ್ಲಾ ಜಮ್ಮು ಕಾಶ್ಮೀರದ ಮೊದಲ ಸರ್ಕಾರದ ಮುಖ್ಯಸ್ಥರಾದರು. ಉಮರ್ ಜೊತೆಗೆ ಐವರು ಸಚಿವರೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ರಾಜೌರಿಯ ನೌಶೇರಾ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ರವೀಂದರ್ ರೈನಾ ಅವರನ್ನು ಸೋಲಿಸಿದ್ದ ಸುರೀಂದರ್ ಚೌಧರಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇದುವರೆಗೆ ಪ್ರಮಾಣ ವಚನ ಸ್ವೀಕರಿಸಿದ ಐವರ ಪೈಕಿ ಏಕೈಕ ಮಹಿಳೆ ಸಕೀನಾ ಇಟೂ. ಅವರು ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ನೂರಾಬಾದ್ ಕ್ಷೇತ್ರದಿಂದ ಗೆದ್ದಿದ್ದಾರೆ. ಈ ಹಿಂದೆ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ. ಅವರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪಿರ್ ಪಂಜಾಲ್ ಪ್ರದೇಶದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷರಾಗಿರುವ ಜಾವೇದ್ ರಾಣಾ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಅವರ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವು ನೀಡಿದ ಅದ್ಭುತ ಪ್ರದರ್ಶನಕ್ಕೆ ಅವರಿಗೆ ಸಚಿವ ಸ್ಥಾನ ಅರಸಿ ಬಂದಿದೆ. ರಾಜೌರಿಯ ಮೆಂಧಾರ್‌ನಿಂದ ಜಾವೇದ್ ರಾಣಾ ಮೂರು ಬಾರಿ ಶಾಸಕರಾಗಿದ್ದರು. ಈ ಬಾರಿಯೂ ಗೆದ್ದು ಅವರು ವಿಜಯ ಪತಾಕೆ ಹಾರಿಸಿದ್ದಾರೆ.

ಉತ್ತರ ಕಾಶ್ಮೀರದ ರಫಿಯಾಬಾದ್‌ನ ಶಾಸಕ, ನ್ಯಾಷನಲ್ ಕಾನ್ಫರೆನ್ಸ್ ನ ವಲಯ ಅಧ್ಯಕ್ಷರಾಗಿರುವ ಮತ್ತೊಬ್ಬ ಮಾಜಿ ಸಚಿವ ಜಾವೇದ್ ದಾರ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಜಮ್ಮುವಿನ ಚಾಂಬ್‌ನ ಪಕ್ಷೇತರ ಶಾಸಕ ಸತೀಶ್ ಶರ್ಮಾ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನ್ಯಾಶನಲ್ ಕಾನ್ಫರೆನ್ಸ್ ಗೆ ಬೆಂಬಲ ನೀಡಿದ ಪಕ್ಷೇತರರಲ್ಲಿ ಅವರೂ ಒಬ್ಬರು.

ಶೇರ್-ಇ-ಕಾಶ್ಮೀರ್ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಎಡ ಪಕ್ಷಗಳ ನಾಯಕರಾದ ಪ್ರಕಾಶ್ ಕಾರಟ್ ಮತ್ತು ಡಿ. ರಾಜಾ, ಡಿಎಂಕೆಯ ಕನಿಮೋಳಿ ಮತ್ತು ಎನ್‌ಸಿಪಿಯ ಸುಪ್ರಿಯಾ ಸುಳೆ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News