ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರಳಿಸಲು ಆಗ್ರಹಿಸುವ ನಿರ್ಣಯ ವಿಧಾನಸಭೆಯಲ್ಲಿ ಅಂಗೀಕಾರ

Update: 2024-11-06 15:17 GMT

PC : PTI 

ಶ್ರೀನಗರ : ಸಂವಿಧಾನದ 370ನೇ ವಿಧಿಯಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರಳಿಸುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳೊಂದಿಗೆ ಮಾತುಕತೆಗಳನ್ನು ನಡೆಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುವ ನಿರ್ಣಯವೊಂದನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಬಿಜೆಪಿಯ ಪ್ರಬಲ ವಿರೋಧದ ನಡುವೆಯೇ ಬುಧವಾರ ಅಂಗೀಕರಿಸಿತು.

ಉಪಮುಖ್ಯಮಂತ್ರಿ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಹಿರಿಯ ನಾಯಕ ಸುರಿಂದರ್ ಕುಮಾರ್ ಚೌಧರಿ ಬುಧವಾರ ವಿಶೇಷ ಸ್ಥಾನಮಾನ ಮರಳಿಕೆಗೆ ಸಂಬಂಧಿಸಿದ ನಿರ್ಣಯವನ್ನು ಮಂಡಿಸಿದರು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರಳಿಸಲು, ಅದಕ್ಕೆ ಸಾಂವಿಧಾನಿಕ ಖಾತರಿ ನೀಡಲು ಮತ್ತು ಅದರ ಮರಳಿಕೆಗೆ ಬೇಕಾದ ಸಾಂವಿಧಾನಿಕ ವ್ಯವಸ್ಥೆಗಳನ್ನು ರೂಪಿಸಲು ಚುನಾಯಿತ ಜನಪ್ರತಿನಿಧಿಗಳೊಂದಿಗೆ ಮಾತುಕತೆ ಆರಂಭಿಸುವಂತೆ ನಿರ್ಣಯವು ಭಾರತ ಸರಕಾರಕ್ಕೆ ಕರೆ ನೀಡುತ್ತದೆ.

ವಿಶೇಷ ಸ್ಥಾನಮಾನ ಮರಳಿಕೆಯ ಯಾವುದೇ ಪ್ರಕ್ರಿಯೆಯು ರಾಷ್ಟ್ರೀಯ ಏಕತೆ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರ ನ್ಯಾಯೋಚಿತ ಆಶೋತ್ತರಗಳೆರಡನ್ನೂ ಖಾತರಿಪಡಿಸಬೇಕು ಎಂದು ನಿರ್ಣಯ ಹೇಳಿದೆ.

ಉಪಮುಖ್ಯಮಂತ್ರಿ ನಿರ್ಣಯವನ್ನು ಮಂಡಿಸುತ್ತಿರುವಂತೆಯೇ, ಬಿಜೆಪಿ ಸದಸ್ಯರು ತಮ್ಮ ಕುರ್ಚಿಗಳಿಂದ ಎದ್ದು ನಿಂತು ಅದರ ವಿರುದ್ಧ ಪ್ರತಿಭಟಿಸಿದರು. ಈ ನಿರ್ಣಯವು ಸದನದ ದಿನದ ಕಲಾಪಗಳ ಭಾಗವಲ್ಲ ಎಂದು ಅವರು ವಾದಿಸಿದರು.

ಬಿಜೆಪಿ ಸದಸ್ಯರ ಪ್ರತಿಭಟನೆ ಮುಂದುವರಿದಂತೆಯೇ, ಈ ವಿಷಯದ ಬಗ್ಗೆ ಮಾತನಾಡುವಂತೆ ಸ್ಪೀಕರ್ ಅಬ್ದುಲ್ ರಹೀಮ್ ರಾತಿರ್ ಓರ್ವ ಬಿಜೆಪಿ ಸದಸ್ಯರಿಗೆ ಸೂಚಿಸಿದರು. ಆದರೆ, ಬಿಜೆಪಿ ಸದಸ್ಯರು ತಮ್ಮ ಪ್ರತಿಭಟನೆ ಮತ್ತು ಘೋಷಣೆಗಳನ್ನು ಮುಂದುವರಿಸಿದರು.

‘‘ನೀವು ಮಾತನಾಡಲು ಬಯಸುವುದಿಲ್ಲವಾದರೆ, ನಾನು ನಿರ್ಣಯವನ್ನು ಮತಕ್ಕೆ ಹಾಕುತ್ತೇನೆ’’ ಎಂದು ಸ್ಪೀಕರ್ ಬಿಜೆಪಿ ಸದಸ್ಯರಿಗೆ ಹೇಳಿದರು. ಬಿಜೆಪಿಯ ಪ್ರತಿಭಟನೆ ಮುಂದುವರಿದಂತೆಯೇ, ನಿರ್ಣಯವನ್ನು ಸ್ಪೀಕರ್ ಮತಕ್ಕೆ ಹಾಕಿದರು.

ಬಿಜೆಪಿಯ ಪ್ರತಿಭಟನೆ ಮತ್ತು ಘೋಷಣೆಗಳ ನಡುವೆಯೇ ನಿರ್ಣಯವು ಸದನದಲ್ಲಿ ಅಂಗೀಕಾರಗೊಂಡಿತು.

ಆ ಬಳಿಕ ಸ್ಪೀಕರ್ ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು.

2019 ಆಗಸ್ಟ್ 15ರಂದು, ಕೇಂದ್ರ ಸರಕಾರವು ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ರದ್ದುಗೊಳಿಸಿದೆ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ.

►ಹೊರಗಿನವರು ಜಮೀನು ಖರೀದಿಸುತ್ತಿದ್ದಾರೆ, ಉದ್ಯೋಗ ಪಡೆಯುತ್ತಿದ್ದಾರೆ...

ಹೊರಗಿನವರು ಜಮ್ಮು ಮತ್ತು ಕಾಶ್ಮೀರದಲ್ಲಿ ಜಮೀನು ಖರೀದಿಸುತ್ತಿರುವುದರಿಂದ ಸ್ಥಳೀಯರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸದನ ಮುಂದೂಡಿಕೆಯ ಅವಧಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಸುರಿಂದರ್ ಕುಮಾರ್ ಚೌಧರಿ ಹೇಳಿದರು.

‘‘ಜಮ್ಮು ಮತ್ತು ಕಾಶ್ಮೀರದ ಜನತೆಯ ಭವಿಷ್ಯವನ್ನು ಸುಭದ್ರಗೊಳಿಸುವ ಏಕೈಕ ಉದ್ದೇಶದಿಂದ ನಾವು ಈ ನಿರ್ಣಯವನ್ನು ಮಂಡಿಸಿದ್ದೇವೆ. ಕೇಂದ್ರಾಡಳಿತ ಪ್ರದೇಶದ ಅಡಿಯಲ್ಲಿ ರಾಜ್ಯದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೊರಗಿನವರು ಇಲ್ಲಿ ಜಮೀನು ಖರೀದಿಸಿ ಇಲ್ಲಿನ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರಕಾರವು ಬಿಹಾರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೂ ವಿಶೇಷ ಸ್ಥಾನಮಾನದ ಭರವಸೆ ನೀಡಿದೆ. ಬಿಜೆಪಿಯು ಸದನದಲ್ಲಿ ರಾಮನ ಹೆಸರನ್ನು ಹೇಳುವಾಗ, ಪ್ರತಿಯೊಬ್ಬರಿಗೂ ಹಕ್ಕುಗಳು ಇರಬೇಕು ಮತ್ತು ಜಮ್ಮು ಮತ್ತು ಕಾಶ್ಮೀರವು ವಿಶೇಷ ಸ್ಥಾನಮಾನವನ್ನು ಪಡೆಯಬೇಕು ಎಂಬುದಾಗಿ ಬಿಜೆಪಿಗೆ ಹೇಳಲು ನಾವು ಬಯುಸುತ್ತೇವೆ... ಲೆಫ್ಟಿನೆಂಟ್ ಗವರ್ನರ್‌ರ ಆಳ್ವಿಕೆಯಲ್ಲಿ ರಜೌರಿ, ಚೀನಾಬ್ ಕಣಿವೆ, ಕತುವ ಮತ್ತು ಸಾಂಬಾಗಳಲ್ಲಿ ಭಯೋತ್ಪಾದನೆ ಕೊನೆಗೊಂಡಿದೆಯೇ?’’ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News