ಜಮ್ಮು-ಕಾಶ್ಮೀರ | ಉಗ್ರ ನಿಗ್ರಹ ಕಾರ್ಯಾಚರಣೆ ಸಂದರ್ಭ ನಾಗರಿಕರಿಗೆ ಕಿರುಕುಳ ಆರೋಪ: ತನಿಖೆಗೆ ಆದೇಶಿಸಿದ ಭಾರತೀಯ ಸೇನೆ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರದಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆ ಸಂದರ್ಭದಲ್ಲಿ ಸ್ಥಳೀಯರಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪಗಳ ಕುರಿತು ಭಾರತೀಯ ಸೇನೆ ತನಿಖೆಗೆ ಆದೇಶಿಸಿದೆ.
ವರದಿಗಳ ಪ್ರಕಾರ, ನವೆಂಬರ್ 20ರಂದು ಮುಘಲ್ ಮೈದಾನ್ ಪ್ರದೇಶದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದ ಕೆಲವು ಯೋಧರು, ಐದು ಮಂದಿ ನಾಗರಿಕರನ್ನು ಥಳಿಸಿದ್ದರಿಂದ, ಅವರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
“ಕಿಶ್ತ್ವಾರ ವಲಯದಲ್ಲಿ ಉಗ್ರರ ಗುಂಪೊಂದು ಸಂಚರಿಸುತ್ತಿದೆ ಎಂಬ ನಿರ್ದಿಷ್ಟ ಗುಪ್ತಚರ ಮಾಹಿತಿಯನ್ನು ಆಧರಿಸಿ, ನವೆಂಬರ್ 20ರಂದು ರಾಷ್ಟ್ರೀಯ ರೈಫಲ್ಸ್ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ನಡೆಸಿತ್ತು” ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಣೆ ಬಿಡುಗಡೆ ಮಾಡಿರುವ ವೈಟ್ ನೈಟ್ಸ್ ಕಾರ್ಪ್ಸ್ ತಿಳಿಸಿದೆ.
ಕಾರ್ಯಾಚರಣೆಯ ಸಂದರ್ಭದಲ್ಲಿ ಕೆಲವು ನಾಗರಿಕರೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ ಎಂಬ ಆರೋಪಗಳ ಕುರಿತು ವರದಿಯಾಗಿದೆ ಎಂದು ಅದು ಹೇಳಿದೆ.
“ವಾಸ್ತವಾಂಶಗಳನ್ನು ಪರಿಶೀಲಿಸಲು ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ. ನಂತರ, ಅಗತ್ಯ ಕ್ರಮವನ್ನು ಖಾತರಿಪಡಿಸಲಾಗುವುದು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉಗ್ರರ ಮತ್ತಷ್ಟು ಚಲನವಲನಗಳ ಮೇಲೆ ನಿಗಾ ಇಡಲಾಗಿದೆ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.