ಜಮ್ಮು-ಕಾಶ್ಮೀರದಲ್ಲಿ ಚುನಾವಣಾ ಪೂರ್ವ ಮೈತ್ರಿ ಕುರಿತು ಬಿಜೆಪಿ ಹೇಳಿದ್ದೇನು?
ಜಮ್ಮು: ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ರೈನಾ ಅವರು ರವಿವಾರ ಇಲ್ಲಿ ತಿಳಿಸಿದರು.
ಚುನಾವಣೆಗಾಗಿ ಬಿಜೆಪಿ ಸಂಪೂರ್ಣ ಸಜ್ಜಾಗಿದೆ ಮತ್ತು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶೀಘ್ರವೇ ಪ್ರಕಟಿಸಲಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ರೈನಾ, ಬಿಜೆಪಿಯು ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ. ಕಾಶ್ಮೀರ ಕಣಿವೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ಸಜ್ಜಾಗಿರುವ 8-10 ಅಭ್ಯರ್ಥಿಗಳೊಂದಿಗೆ ಮಾತುಕತೆಗಳನ್ನು ನಡೆಸುತ್ತಿದ್ದೇವೆ. ಮಾತುಕತೆಗಳು ಸಫಲಗೊಂಡರೆ ಜಂಟಿಯಾಗಿ ಕಣಕ್ಕಿಳಿಯಲು ಕಾರ್ಯತಂತ್ರವನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿಯು ಕಾಶ್ಮೀರ ಕಣಿವೆಯಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ. ಪಕ್ಷವು ಚುನಾವಣೆಯನ್ನು ಬಹುಮತದಿಂದ ಗೆಲ್ಲಲಿದೆ ಮತ್ತು ಜಮ್ಮು-ಕಾಶ್ಮೀರದಲ್ಲಿ ಸರಕಾರವನ್ನು ರಚಿಸಲಿದೆ ಎಂದು ರೈನಾ ಹೇಳಿದರು.
ಮಾಜಿ ಸಚಿವ ಚೌಧರಿ ಝುಲ್ಫಿಕರ್ ಅಲಿ ಅವರ ಬಿಜೆಪಿ ಸೇರ್ಪಡೆ ಕುರಿತಂತೆ ರೈನಾ,ಅವರು ರಾಜೌರಿ-ಪೂಂಛ್ ಪ್ರದೇಶದಲ್ಲಿ ಬಲವಾದ ಬೆಂಬಲವನ್ನು ಹೊಂದಿದ್ದಾರೆ ಮತ್ತು ಅವರ ಸೇರ್ಪಡೆಯಿಂದ ಪಕ್ಷವು ಹೆಚ್ಚಿನ ಬಲವನ್ನು ಪಡೆಯಲಿದೆ ಎಂದರು.
370ನೇ ವಿಧಿ ಕುರಿತು ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾರ ಹೇಳಿಕೆಗೆ ಪ್ರತಿಕ್ರಿಯಿಸಿದ ರೈನಾ, ಅವರ ಪಕ್ಷವು ಜಮ್ಮು-ಕಾಶ್ಮೀರದಲ್ಲಿ ನೆಲೆಯನ್ನು ಕಳೆದುಕೊಳ್ಳುತ್ತಿದೆ, ಹೀಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎಂದರು.
ಚುನಾವಣೆಯಲ್ಲಿ ತನ್ನ ಪಕ್ಷವು ಗೆದ್ದರೆ ಮೊಟ್ಟಮೊದಲ ಕ್ರಮವಾಗಿ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರದ ನಿರ್ಧಾರದ ವಿರುದ್ಧ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗುವುದು ಎಂದು ಅಬ್ದುಲ್ಲಾ ಶನಿವಾರ ಹೇಳಿದ್ದರು.