ಜಮ್ಮುಕಾಶ್ಮೀರ ರಾಜ್ಯ ಸ್ಥಾನಮಾನ ಮರುಸ್ಥಾಪನೆ | ಸರಕಾರದ ನಿರ್ಣಯಕ್ಕೆ ಎಲ್‌ಜಿ ಮನೋಜ ಸಿನ್ಹಾ ಅನುಮೋದನೆ

Update: 2024-10-19 15:45 GMT

PC : PTI 

ಶ್ರೀನಗರ : ಜಮ್ಮುಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ನೇತೃತ್ವದ ಸಂಪುಟವು ಅಂಗೀಕರಿಸಿರುವ ನಿರ್ಣಯವನ್ನು ಲೆಫ್ಟಿನಂಟ್ ಗವರ್ನರ್ (ಎಲ್‌ಜಿ) ಮನೋಜ ಸಿನ್ಹಾ ಅವರು ಶನಿವಾರ ಅನುಮೋದಿಸಿದ್ದಾರೆ.

ಗುರುವಾರ ಅಬ್ದುಲ್ಲಾ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಸಂಪುಟವು ಜಮ್ಮುಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಅದರ ಮೂಲ ಸ್ವರೂಪದಲ್ಲಿ ಮರುಸ್ಥಾಪನೆಗಾಗಿ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ಅಧಿಕೃತ ವಕ್ತಾರರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ರಾಜ್ಯ ಸ್ಥಾನಮಾನದ ಮರುಸ್ಥಾಪನೆಯು ಉಪಶಮನ ಪ್ರಕ್ರಿಯೆಯ ಆರಂಭವಾಗಲಿದೆ. ಇದು ಜಮ್ಮುಕಾಶ್ಮೀರದ ಜನತೆಯ ಸಾಂವಿಧಾನಿಕ ಹಕ್ಕುಗಳನ್ನು ಮರಳಿ ಪಡೆಯುವುದರೊಡನೆ ಅವರ ಅನನ್ಯತೆಯನ್ನು ರಕ್ಷಿಸಲಿದೆ. ರಾಜ್ಯ ಸ್ಥಾನಮಾನ ವಿಷಯ ಕುರಿತು ಅಬ್ದುಲ್ಲಾ ಅವರು ಸದ್ಯವೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರನ್ನು ದಿಲ್ಲಿಯಲ್ಲಿ ಭೇಟಿಯಾಗಲಿದ್ದಾರೆ ಎಂದು ತಿಳಿಸಿದ ವಕ್ತಾರರು, ಜಮ್ಮುಕಾಶ್ಮೀರದ ವಿಶಿಷ್ಟ ಅನನ್ಯತೆ ಮತ್ತು ಜನತೆಯ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯು ನೂತನವಾಗಿ ಚುನಾಯಿತ ಸರಕಾರದ ಮೂಲಾಧಾರವಾಗಿದೆ ಎಂದರು.

ನ.4ರಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಅಧಿವೇಶನವನ್ನು ನಡೆಸಲು ಜಮ್ಮುಕಾಶ್ಮೀರ ಸಂಪುಟವು ನಿರ್ಧರಿಸಿದ್ದು, ಸದನವನ್ನು ಉದ್ದೇಶಿಸಿ ಭಾಷಣ ಮಾಡುವಂತೆ ಎಲ್‌ಜಿಯವರನ್ನು ಆಹ್ವಾನಿಸಿದೆ ಎಂದು ಅವರು ತಿಳಿಸಿದರು.

ಅಬ್ದುಲ್ಲಾ ಜಮ್ಮುಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾದ ಬಳಿಕ ಗುರುವಾರ ಅದರ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರು 2009ರಿಂದ 2015ರವರೆಗೆ ಹಿಂದಿನ ಜಮ್ಮುಕಾಶ್ಮೀರ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News