ಜಮ್ಮು- ಕಾಶ್ಮೀರ ವಿಧಾನಸಭಾ ಚುನಾವಣೆ | ಮೊದಲ ಹಂತದ ಚುನಾವಣೆ ; ಕಣದಲ್ಲಿ ಶೇ.40ಕ್ಕೂ ಅಧಿಕ ಪಕ್ಷೇತರ ಅಭ್ಯರ್ಥಿಗಳು

Update: 2024-09-17 14:58 GMT

PC ; PTI 

ಶ್ರೀನಗರ : ಸಂವಿಧಾನದ ವಿಧಿ 370ರ ರದ್ದತಿಯ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಪಕ್ಷೇತರರು ತಮ್ಮ ಅದೃಷ್ಟ ಪರೀಕ್ಷೆಗಾಗಿ ಕಣಕ್ಕಿಳಿದಿದ್ದಾರೆ. ಚುನಾವಣೆಯು ಮೂರು ಹಂತಗಳಲ್ಲಿ ನಡೆಯಲಿದ್ದು,ಸೆ.18ರಂದು ಮತದಾನ ನಡೆಯಲಿರುವ ಮೊದಲ ಹಂತದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಶೇ.40ಕ್ಕೂ ಹೆಚ್ಚಿನ ಪಕ್ಷೇತರರಿದ್ದಾರೆ.

ಮೊದಲ ಹಂತದ ಚುನಾವಣೆಗಾಗಿ ಪ್ರಚಾರ ಮಂಗಳವಾರ ಅಂತ್ಯಗೊಂಡಿದ್ದು ಒಟ್ಟು 219 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಮ್ಮು ಪ್ರದೇಶದ 43 ಕ್ಷೇತ್ರಗಳ ಪೈಕಿ 8ರಲ್ಲಿ ಮತ್ತು ಕಾಶ್ಮೀರದ 47 ಕ್ಷೇತ್ರಗಳ ಪೈಕಿ 16ರಲ್ಲಿ ಸೆ.18ರಂದು ಮತದಾನ ನಡೆಯಲಿದೆ.

ಕಣಿವೆಯಲ್ಲಿ 16 ಸ್ಥಾನಗಳಿಗಾಗಿ ಕಣದಲ್ಲಿರುವ 155 ಅಭ್ಯರ್ಥಿಗಳ ಪೈಕಿ 67 ಜನರು ಪಕ್ಷೇತರರಾಗಿದ್ದಾರೆ. ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸಿರುವ ಕೇವಲ 49 ಅಭ್ಯರ್ಥಿಗಳು ನೋಂದಾಯಿತ ರಾಜಕೀಯ ಪಕ್ಷಗಳಿಗೆ ಸೇರಿದ್ದು, 39 ಅಭ್ಯರ್ಥಿಗಳು ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಇತರ ಪಕ್ಷಗಳಿಗೆ ಸೇರಿದವರಾಗಿದ್ದಾರೆ.

ಕಣಿವೆಯಲ್ಲಿ ಶೇ.43.22ರಷ್ಟು ಅಭ್ಯರ್ಥಿಗಳು ಪಕ್ಷೇತರರಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರು ಕಣದಲ್ಲಿರುವುದು ಚುನಾವಣಾ ಫಲಿತಾಂಶಗಳ ಬಗ್ಗೆ ಊಹಿಸುವುದನ್ನೂ ಅಸಾಧ್ಯವಾಗಿಸಿದೆ. ಅತ್ಯಂತ ಹೆಚ್ಚಿನ ಸಂಖ್ಯೆಯ(14) ಅಭ್ಯರ್ಥಿಗಳು ಪಾಂಪೋರ್ ಕ್ಷೇತ್ರದಲ್ಲಿದ್ದು ಈ ಪೈಕಿ ಏಳು ಜನರು ಪಕ್ಷೇತರರಾಗಿದ್ದಾರೆ.

ಭಾರೀ ಸಂಖ್ಯೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಿರುವುದು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಹಾನಿಯನ್ನುಂಟು ಮಾಡಲಿದೆ, ಈ ಪಕ್ಷೇತರರು ಅವರ ಮತಗಳನ್ನು ಸೆಳೆಯುತ್ತಾರೆ ಎಂದು ರಾಜಕೀಯ ವೀಕ್ಷಕರೋರ್ವರು ಅಭಿಪ್ರಾಯಿಸಿದರು.

ಜಮ್ಮು ಪ್ರದೇಶದಲ್ಲಿಯೂ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದ ಮತದಾನ ನಡೆಯಲಿರುವ ಎಂಟು ಕ್ಷೇತ್ರಗಳಲ್ಲಿರುವ 64 ಅಭ್ಯರ್ಥಿಗಳ ಪೈಕಿ 25 ಜನರು ಪಕ್ಷೇತರರಾಗಿದ್ದಾರೆ. 31 ಅಭ್ಯರ್ಥಿಗಳು ನೋಂದಾಯಿತ ರಾಜಕೀಯ ಪಕ್ಷಗಳಿಗೆ ಸೇರಿದ್ದು, 8 ಅಭ್ಯರ್ಥಿಗಳು ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಇತರ ಪಕ್ಷಗಳಿಗೆ ಸೇರಿದವರಾಗಿದ್ದಾರೆ.

ಮೂವರು ಪಕ್ಷೇತರರು ಸೇರಿದಂತೆ ಅತ್ಯಂತ ಹೆಚ್ಚಿನ (10) ಅಭ್ಯರ್ಥಿಗಳು ಭದೇರ್ವಾ ಕ್ಷೇತ್ರದಲ್ಲಿ ಸ್ಪಧಿಸಿದ್ದಾರೆ.

ರಂಬಾನ್ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರು ಸ್ಪರ್ಧಿಸಿದ್ದಾರೆ. ಕಣದಲ್ಲಿರುವ ಎಂಟು ಅಭ್ಯರ್ಥಿಗಳ ಪೈಕಿ ಐವರು ಪಕ್ಷೇತರರಾಗಿದ್ದಾರೆ.

ಮತಗಳನ್ನು ಒಡೆಯಲು ಬಿಜೆಪಿ ಪಕ್ಷೇತರ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದೆ ಎಂದು ಮೂರು ಪ್ರಮುಖ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮತ್ತು ಪಿಡಿಪಿ ಆರೋಪಿಸಿವೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News