ಜಮ್ಮು: ಕಾಶ್ಮೀರ ಪಂಡಿತರ ಸಂಘಟನೆ ಕಾಂಗ್ರೆಸ್ ಜೊತೆ ವಿಲೀನ
ಜಮ್ಮು: ಕಾಶ್ಮೀರಿ ಪಂಡಿತರ ಸಂಘಟನೆಗಳಲ್ಲಿ ಒಂದಾಗಿರುವ ಆಲ್ ಇಂಡಿಯಾ ಕಾಶ್ಮೀರಿ ಹಿಂದೂ ಫಾರಂ (ಎಐಕೆಎಚ್‌ಎಫ್) ಶನಿವಾರ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿತು.
ಜಮ್ಮು ಹಾಗೂ ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಕಾರ್ ರಸೂಲ್ ವಾನಿ ಅವರು ಪಕ್ಷದ ಕಚೇರಿಯಲ್ಲಿ ಎಐಕೆಎಚ್‌ಎಫ್ ಅಧ್ಯಕ್ಷ ರತನ್ ಲಾಲ್ ಭಾನ್ ಹಾಗೂ ಇತರ ಪದಾಧಿಕಾರಿಗಳನ್ನು ಪಕ್ಷಕ್ಕೆ ಬರ ಮಾಡಿಕೊಂಡರು.
ಎಐಕೆಎಚ್‌ಎಫ್ 1998ರಲ್ಲಿ ಸ್ಥಾಪನೆಯಾಗಿತ್ತು. ಈ ಸಂಘಟನೆಯ ನೂರಾರು ಜನರು ಕಾಂಗ್ರೆಸ್‌ಗೆ ಸೇರಿರುವುದರಿಂದ ಪಕ್ಷಕ್ಕೆ ಬಲ ಬಂದಂತಾಗಿದೆ ಎಂದು ವಾನಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಕಾಶ್ಮೀರ ಪಂಡಿತರ ಎಲ್ಲಾ ಸಂಘಟನೆಗಳು ಕಾಂಗ್ರೆಸ್‌ಗೆ ಸೇರುವಂತೆ ಕರೆ ನೀಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಳೆದ 10 ವರ್ಷಗಳಿಂದ ಕಾಶ್ಮೀರಿ ಪಂಡಿತ ಸಮುದಾಯವನ್ನು ಮೂರ್ಖರನ್ನಾಗಿಸಿದೆ ಎಂದು ಆರೋಪಿಸಿದರು.
‘‘ಬಿಜೆಪಿ ಅಧಿಕಾರಕ್ಕೆ ಬರಲು ಕಾಶ್ಮೀರಿ ಪಂಡಿತರ ದುರವಸ್ಥೆಯನ್ನು ದೇಶಾದ್ಯಂತ ಮಾರಾಟ ಮಾಡಿತು ಹಾಗೂ ಪುನರ್ವಸತಿ ಕಲ್ಪಿಸುವುದಾಗಿ ಕಾಶ್ಮೀರಿ ಪಂಡಿತರಿಗೆ ಭರವಸೆ ನೀಡಿತು. ಬಿಜೆಪಿ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದೆ. ಆದರೆ, ಕಾಶ್ಮೀರಿ ಪಂಡಿತರಿಗಾಗಿ 10 ಪೈಸೆಯ ಕೆಲಸವನ್ನು ಕೂಡ ಅದು ಮಾಡಿಲ್ಲ’’ ಎಂದು ವಾನಿ ಹೇಳಿದರು.
‘‘ಬಿಜೆಪಿ ಕಳೆದ 10 ವರ್ಷಗಳಿಂದ ಕಾಶ್ಮೀರಿ ಪಂಡಿತರನ್ನು ಮೂರ್ಖರನ್ನಾಗಿಸುತ್ತಿರುವುದರಿಂದ ಇತರ ಕಾಶ್ಮೀರಿ ಪಂಡಿತರ ಸಂಘಟನೆಗಳು ಕಾಂಗ್ರೆಸ್‌ಗೆ ಹಿಂದಿರುಗುವಂತೆ ನಾನು ಮನವಿ ಮಾಡುತ್ತೇವೆ. ನೆಹರೂ ಕುಟುಂಬ ಮೂಲತಃ ಕಾಶ್ಮೀರಕ್ಕೆ ಸೇರಿದೆ. ಅಲ್ಲದೆ, ಅವರಿಗೆ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರ ಬಗ್ಗೆ ಸಾಕಷ್ಟು ಅನುಕಂಪ ಇತ್ತು. ಕಾಂಗ್ರೆಸ್ ಪಕ್ಷ ಅವರಿಗಾಗಿ ಸಾಕಷ್ಟು ಕೆಲಸ ಮಾಡಿದೆ’’ ಎಂದು ಅವರು ತಿಳಿಸಿದರು.
ಈ ಸಂದರ್ಭ ಮಾತನಾಡಿದ ರತನ್ ಲಾಲ್ ಭಾನ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಕಾಶ್ಮೀರಿ ಪಂಡಿತರಿಗೆ ಸಾಕಷ್ಟು ಕೆಲಸಗಳನ್ನು ಮಾಡಿರುವುದರಿಂದ ತನ್ನ ಸಂಘಟನೆಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದೆ ಎಂದಿದ್ದಾರೆ.
‘‘ನಾವು ನಮ್ಮ ಕುಟುಂಬಕ್ಕೆ ಹಿಂದಿರುಗಿದ ಅನುಭವವಾಗುತ್ತಿದೆ. ಬಿಜೆಪಿ ಕಾಶ್ಮೀರಿ ಪಂಡಿತರನ್ನು ಕೇವಲ ಶೋಷಣೆ ಮಾಡಿತು. ಅದು ನಮಗಾಗಿ ಏನನ್ನೂ ಮಾಡಿಲ್ಲ’’ ಎಂದು ಭಾನ್ ಹೇಳಿದ್ದಾರೆ.