ರಾಂಚಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಜಾರ್ಖಂಡ್ ಮುಖ್ಯಮಂತ್ರಿ

Update: 2024-01-30 17:33 GMT

ಹೇಮಂತ್ ಸೊರೇನ್ | Photo; PTI 

ರಾಂಚಿ : ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಎಲ್ಲಿದ್ದಾರೆ ಎಂಬ ಕುರಿತ ರಾಜಕೀಯ ಊಹಾಪೋಹಗಳು ಹರಡಿದ ಒಂದು ದಿನದ ಬಳಿಕ, ಮಂಗಳವಾರ ಅವರು ತನ್ನ ಆಡಳಿತಾರೂಢ ಮೈತ್ರಿಕೂಟದ ಸಚಿವರ ಸಭೆ ನಡೆಸಿದ್ದಾರೆ.

ಭೂ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಅನುಷ್ಠಾನ ನಿರ್ದೇಶನಾಲಯದ ತನಿಖೆಯನ್ನು ತಪ್ಪಿಸುವುದಕ್ಕಾಗಿ ಮುಖ್ಯಮಂತ್ರಿ ‘‘ತಲೆಮರೆಸಿಕೊಂಡಿದ್ದಾರೆ’’ ಎಂಬುದಾಗಿ ಬಿಜೆಪಿ ಆರೋಪಿಸಿದ ಬಳಿಕ, ಅವರು ಸಚಿವ ಸಂಪುಟದ ಸಭೆ ನಡೆಸಿದ್ದಾರೆ.

ಈ ನಡುವೆ, ಬುಧವಾರ ಮಧ್ಯಾಹ್ನ ಒಂದು ಗಂಟೆಗೆ ರಾಂಚಿಯಲ್ಲಿರುವ ತನ್ನ ನಿವಾಸದಲ್ಲಿ ಅನುಷ್ಠಾನ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹೇಳಿಕೆ ನೀಡಲು ಮುಖ್ಯಮಂತ್ರಿ ಒಪ್ಪಿದ್ದಾರೆ.

ಅದೇ ವೇಳೆ, ವಿಚಾರಣೆಯ ಸಮಯವು ರಾಜಕೀಯ ಪ್ರೇರಿತವಾಗಿದೆ ಮತ್ತು ನನ್ನ ಸರಕಾರದ ಕಾರ್ಯನಿರ್ವಹಣೆಯನ್ನು ಅಸ್ತವ್ಯಸ್ತಗೊಳಿಸುವ ಉದ್ದೇಶ ಹೊಂದಿದೆ ಎಂಬಂತೆ ಕಾಣುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಕಾನೂನು ಸಲಹೆಗಾಗಿ ‘‘ದಿಲ್ಲಿ ಆಸುಪಾಸಿನಲ್ಲಿ’’ ಇದ್ದರು ಎಂದು ಅವರಿಗೆ ಆಪ್ತವಾಗಿರುವ ಜನರು ಹೇಳಿದ್ದಾರೆ. ಬುಧವಾರ ಒಂದು ಗಂಟೆಗೆ ವಿಚಾರಣೆಗೆ ಹಾಜರಾಗುವುದಾಗಿ ಅವರು ಈಗಾಗಲೇ ಮಾಹಿತಿ ನೀಡಿರುವುದರಿಂದ, ಅವರನ್ನು ‘‘ಹುಡುಕಿಕೊಂಡು’’ ಬರುವ ಅಗತ್ಯ ತನಿಖಾ ಸಂಸ್ಥೆಗೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಸೋಮವಾರ ಸೊರೇನ್ರ ದಿಲ್ಲಿ ನಿವಾಸದಿಂದ ಅನುಷ್ಠಾನ ನಿರ್ದೇಶನಾಲಯವು ಒಂದು ವಿಲಾಸಿ ಕಾರು, 36 ಲಕ್ಷ ರೂ. ನಗದು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಜಾರ್ಖಂಡ್ ಮುಖ್ಯಮಂತ್ರಿಗಾಗಿ ಈಡಿ ಹುಡುಕುತ್ತಿದ್ದರೂ, ಸುಮಾರು 1,300 ಕಿ.ಮೀ. ದೂರವನ್ನು ರಸ್ತೆಯ ಮೂಲಕವೇ ಕ್ರಮಿಸಿ ಅವರು ರಾಂಚಿ ತಲುಪಿದ್ದಾರೆ ಎಂದು ಅವರಿಗೆ ಆಪ್ತರಾಗಿರುವ ಜನರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News