ಜಾರ್ಖಂಡ್ ಸರಕಾರ ರಚನೆ ವಿಳಂಬ: ರಾಜ್ಯಸಭೆಯಿಂದ ಹೊರನಡೆದ ಕಾಂಗ್ರೆಸ್, ಇತರ ಪ್ರತಿಪಕ್ಷಗಳು

Update: 2024-02-02 16:15 GMT

ಮಲ್ಲಿಕಾರ್ಜುನ ಖರ್ಗೆ | Photo: PTI 

ಹೊಸದಿಲ್ಲಿ : ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೇನ್ ಅವರ ರಾಜೀನಾಮೆಯ ಬಳಿಕ ರಾಜ್ಯಪಾಲರು ರಾಜ್ಯದಲ್ಲಿ ಆಡಳಿತಕ್ಕಾಗಿ ಮಧ್ಯಂತರ ವ್ಯವಸ್ಥೆಯನ್ನು ಮಾಡದ್ದನ್ನು ಪ್ರತಿಭಟಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಶುಕ್ರವಾರ ರಾಜ್ಯಸಭೆಯ ಕಲಾಪಗಳನ್ನು ಬಹಿಷ್ಕರಿಸಿದವು.

ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಜಾರ್ಖಂಡ್‌ ನಲ್ಲಿ ಬೆಳವಣಿಗೆಗಳನ್ನು ನೆರೆಯ ಬಿಹಾರದೊಂದಿಗೆ ಹೋಲಿಸಿದರು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡಿದಾಗ ಅದನ್ನು ತಕ್ಷಣ ಸ್ವೀಕರಿಸಲಾಗಿತ್ತು ಮತ್ತು ನೂತನ ಸರಕಾರ ರಚನೆಯಾಗುವವರೆಗೆ ಅಧಿಕಾರದಲ್ಲಿ ಮುಂದುವರಿಯುವಂತೆ ಅವರಿಗೆ ಸೂಚಿಸಲಾಗಿತ್ತು. ಇವೆಲ್ಲ ಬೆಳವಣಿಗೆಗಳು 12 ಗಂಟೆಗಳಲ್ಲಿ ನಡೆದಿದ್ದವು. ಆದರೆ ಸೊರೇನ್ ಬುಧವಾರ ರಾಜೀನಾಮೆ ನೀಡಿದಾಗ ಯಾವುದೇ ಮಧ್ಯಂತರ ವ್ಯವಸ್ಥೆಯನ್ನು ಮಾಡಿರಲಿಲ್ಲ ಎಂದು ಅವರು ಬೆಟ್ಟು ಮಾಡಿದರು.

ಸೊರೇನ್ ರಾಜೀನಾಮೆಯ ಬಳಿಕ 81 ಸದಸ್ಯ ಬಲದ ವಿಧಾನಸಭೆಯಲ್ಲಿ 43 ಬೆಂಬಲಿಗ ಶಾಸಕರ ಸಹಿಗಳೊಂದಿಗೆ ಅವರ ಉತ್ತರಾಧಿಕಾರಿಯ ಹೆಸರನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು. ಈ ಅಧಿಕಾರ ವರ್ಗಾವಣೆಯನ್ನು ಬೆಂಬಲಿಸಿದ್ದ ಇತರ ನಾಲ್ವರು ಶಾಸಕರು ರಾಜ್ಯದಿಂದ ಹೊರಗಿದ್ದರಿಂದ ಅವರು ಸಹಿ ಮಾಡಿರಲಿಲ್ಲ. ಆದರೆ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರು ಯಾವುದೇ ಮಧ್ಯಂತರ ವ್ಯವಸ್ಥೆಯನ್ನು ಕಲ್ಪಿಸಿರಲಿಲ್ಲ. ಸಂವಿಧಾನದ ಪ್ರಕಾರ ಇದು ರಾಜ್ಯಪಾಲರ ಕರ್ತವ್ಯವಾಗಿತ್ತು ಎಂದು ಹೇಳಿದ ಖರ್ಗೆ, ಸುಮಾರು 20 ಗಂಟೆಗಳ ಕಾಯುವಿಕೆಯ ಬಳಿಕ ಜೆಎಂಎಂ ನ ನೂತನ ಚುನಾಯಿತ ನಾಯಕ ಚಂಪಾಯಿ ಸೊರೇನ್ ಅವರನ್ನು ರಾಜ್ಯಪಾಲರ ಭೇಟಿಗೆ ಆಹ್ವಾನಿಸಲಾಗಿತ್ತು. ಆಗಲೂ ಶಾಸಕರ ಬೆಂಬಲ ಪತ್ರಗಳಿದ್ದರೂ ಚಂಪಾಯಿ ಅವರನ್ನು ಸರಕಾರ ರಚನೆಗೆ ಆಹ್ವಾನಿಸಿರಲಿಲ್ಲ. ಕೊನೆಗೂ ಚಂಪಾಯಿ ಇಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದರು.

ಸಂವಿಧಾನವನ್ನು ಚೂರು ಚೂರು ಮಾಡಲಾಗುತ್ತಿದೆ ಎಂದ ಖರ್ಗೆ, ಬಿಹಾರದಲ್ಲಿ ಸಂಭವಿಸಿದ್ದು ಜಾರ್ಖಂಡ್‌ ನಲ್ಲಿ ಏಕೆ ಸಂಭವಿಸಿರಲಿಲ್ಲ ಎಂದು ಪ್ರಶ್ನಿಸಿದರು. ಇದು ನಾಚಿಕೆಗೇಡು ಎಂದರು. ಖರ್ಗೆಯವರ ಹೇಳಿಕೆಯನ್ನು ಆಡಳಿತ ಪಕ್ಷದ ಸದಸ್ಯರು ಪ್ರತಿಭಟಿಸಿದರು.

ರಾಜ್ಯಪಾಲರ ನಡವಳಿಕೆಯನ್ನು ಸದನದಲ್ಲಿ ಚರ್ಚಿಸುವಂತಿಲ್ಲ ಎಂದು ಹೇಳಿದ ಸದನ ನಾಯಕ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ರಾಜ್ಯಪಾಲರ ಕ್ರಮಗಳನ್ನು ಸಮರ್ಥಿಸಿಕೊಂಡರು. ಯಾರನ್ನಾದರೂ ಸರಕಾರ ರಚನೆಗೆ ಆಹ್ವಾನಿಸುವ ಮುನ್ನ ಅವರು ಬೆಂಬಲವನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ ಎಂದರು.

ಪಟ್ಟು ಬಿಡದ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ರಾಜ್ಯಪಾಲರು ಮಧ್ಯಂತರ ವ್ಯವಸ್ಥೆಯನ್ನು ಮಾಡದ್ದನ್ನು ಪ್ರತಿಭಟಿಸಿ ಸಭಾತ್ಯಾಗ ನಡೆಸಿದವು.

ಎಲ್ಲ ಸಮಯಗಳಲ್ಲಿಯೂ ಸರಕಾರ ಅಸ್ತಿತ್ವದಲ್ಲಿರಬೇಕು ಎಂದು ಸಂವಿಧಾನ ಹೇಳುತ್ತದೆ ಎಂದ ಬಿ ಆರ್ ಎಸ್ ನ ಕೆ.ಕೇಶವ ರಾವ್ ಅವರು, ಸರಕಾರವು ಮುಖ್ಯಮಂತ್ರಿಯ ನೇತೃತ್ವದಲ್ಲಿರಬೇಕು. ಅವರು ಅಥವಾ ಇವರು ಮುಖ್ಯಮಂತ್ರಿಯಾಗಿರಲಿ, ನಾವು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ದೇಶವನ್ನು ಸಂವಿಧಾನಕ್ಕೆ ಅನುಗುಣವಾಗಿ ನಡೆಸಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News