ಬಜೆಟ್ ನಲ್ಲಿ ಜಾರ್ಖಂಡ್ ಅನ್ನು ನಿರ್ಲಕ್ಷಿಸಲಾಗಿದೆ: ಹೇಮಂತ್ ಸೊರೇನ್
ರಾಂಚಿ: ಕೇಂದ್ರ ಬಜೆಟ್ ನಲ್ಲಿ ಜಾರ್ಖಂಡ್ ಅನ್ನು ನಿರ್ಲಕ್ಷಿಸಿರುವುದಕ್ಕೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಬುಧವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರದ ಬಾಕಿಯ ಕುರಿತು ಬಿಜೆಪಿ ನಾಯಕರು ಮೌನವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಸರಕಾರ ರಾಜ್ಯಕ್ಕೆ 1.36 ಲಕ್ಷ ಕೋ.ರೂ. ನೀಡಬೇಕಾಗಿದೆ ಎಂದು ಕೂಡ ಅವರು ಪ್ರತಿಪಾದಿಸಿದ್ದಾರೆ. ರಾಜ್ಯದ ಬಾಕಿಯನ್ನು ಪಾವತಿಸುವಂತೆ ಅವರು ಆಗ್ರಹಿಸಿದ್ದಾರೆ.
‘‘ರಾಜ್ಯಕ್ಕೆ ತಾರತಮ್ಯದ ತಪ್ಪೆಸಗಿದವರು ಯಾರು ? ಕೇಂದ್ರ ಸರಕಾರ ರಾಜ್ಯಕ್ಕೆ 1.36 ಕೋ.ರೂ. ನೀಡಬೇಕಾಗಿದೆ. ಆದರೆ, ಪ್ರತಿಯೊಬ್ಬ ಬಿಜೆಪಿ ನಾಯಕ ಈ ವಿಷಯದ ಕುರಿತು ಮೌನವಾಗಿದ್ದಾರೆ. ನೀವು ನಿಮ್ಮ ಊರುಗೋಲು (ಜೆಡಿಎಸ್, ಟಿಡಿಪಿ)ಗಳಿಗೆ ವಿಶೇಷ ಪ್ಯಾಕೇಜ್ ನೀಡಿ. ಆದರೆ, ನಮ್ಮ ಬಾಕಿಯನ್ನು ಪಾವತಿಸಿ’’ ಎಂದು ಸೊರೇನ್ ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ತನ್ನ ಬಜೆಟ್ ಪ್ರಸ್ತಾವದಲ್ಲಿ ಎನ್ಡಿಎಯ ಪ್ರಮುಖ ಮಿತ್ರ ಪಕ್ಷಗಳಾದ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) ಹಾಗೂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಆಡಳಿತ ಇರುವ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಹಣಕಾಸು ನೆರವು ಘೋಷಿಸಿರುವುದನ್ನು ಉಲ್ಲೇಖಿಸಿ ಹೇಮಂತ್ ಸೊರೇನ್ ಈ ಹೇಳಿಕೆ ನೀಡಿದ್ದಾರೆ.