ಜಾರ್ಖಂಡ್ ಭೂ ಕಬಳಿಕೆ ಪ್ರಕರಣ | ಇನ್ನೂ ಮೂವರ ಬಂಧನ
ರಾಂಚಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ ಸೊರೇನ್ ಅವರು ಆರೋಪಿಯಾಗಿರುವ ಭೂ ಕಬಳಿಕೆ ಪ್ರಕರಣದಲ್ಲಿ ಇನ್ನೂ ಮೂವರನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಈಡಿ)ವು ರವಿವಾರ ತಿಳಿಸಿದೆ.
ಸಂಜೀತ ಕುಮಾರ, ಮುಹಮ್ಮದ್ ಇರ್ಷಾದ್ ಮತ್ತು ತಪಸ್ ಘೋಷ ಅವರನ್ನು ಮೇ 9ರಂದು ಬಂಧಿಸಲಾಗಿದ್ದು, ಇದರೊಂದಿಗೆ ಸೊರೇನ್ ಸೇರಿದಂತೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 25ಕ್ಕೇರಿದೆ.
ಈಡಿ ತಿಳಿಸಿರುವಂತೆ ಕುಮಾರ ಮತ್ತು ಘೋಷ ಕೋಲ್ಕತಾದ ರಿಜಿಸ್ಟ್ರಾರ್ ಆಫ್ ಅಷ್ಯೂರನ್ಸಸ್ ಕಚೇರಿಯಲ್ಲಿ ಗುತ್ತಿಗೆ ಉದ್ಯೋಗಿಗಳಾಗಿದ್ದರು. ಕಚೇರಿಯಲ್ಲಿನ ಭೂ ದಾಖಲೆಗಳ ಫೋರ್ಜರಿ ಮತ್ತು ತಿದ್ದುವಿಕೆ ಪತ್ತೆಯಾಗಿತ್ತು. ಇಂತಹ ಫೋರ್ಜರಿಗಳ ಮೂಲಕ ಸ್ವಾಧೀನ ಪಡಿಸಿಕೊಂಡ ಕೆಲವು ಜಮೀನುಗಳು ಸೊರೇನ್ ಅವರ ಕಾನೂನುಬಾಹಿರ ವಶದಲ್ಲಿವೆ ಎಂದು ಈಡಿ ಆರೋಪಿಸಿದೆ.
ಜಾರ್ಖಂಡ್‌ನಲ್ಲಿ ಸಕ್ರಿಯವಾಗಿರುವ ಭೂ ಮಾಫಿಯಾ ಜಾಲವು ರಾಂಚಿ ಮತ್ತು ಕೋಲ್ಕತಾಗಳಲ್ಲಿ ಅಧಿಕೃತ ದಾಖಲೆಗಳನ್ನು ತಿದ್ದುವುದರಲ್ಲಿ ತೊಡಗಿಕೊಂಡಿತ್ತು ಎಂದು ಈಡಿ ತಿಳಿಸಿದೆ. ಜಾರ್ಖಂಡ್ ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸರಕಾರಿ ದಾಖಲೆಗಳ ಉಸ್ತುವಾರಿಯನ್ನು ಹೊಂದಿದ್ದ ಭಾನು ಪ್ರತಾಪ್ ಪ್ರಸಾದ್ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾರೆ.