ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣ ; ನಾಲ್ವರು ದೋಷಿಗಳಿಗೆ ಹೈಕೋರ್ಟ್ ಜಾಮೀನು
ಹೊಸದಿಲ್ಲಿ : ಟಿ.ವಿ. ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಅವರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಾಲ್ವರು ಆರೋಪಿಗಳಿಗೆ ದಿಲ್ಲಿ ಉಚ್ಛ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.
ಅಪರಾಧ ಹಾಗೂ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆ ಬಾಕಿ ಇರುವ ವರೆಗೆ ದೋಷಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜೀತ್ ಸಿಂಗ್ ಮಲಿಕ್ ಹಾಗೂ ಅಜಯ್ ಕುಮಾರ್ ಅವರ ಶಿಕ್ಷೆಯನ್ನು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಹಾಗೂ ಮನೋಜ್ ಜೈನ್ ಅವರನ್ನು ಒಳಗೊಂಡ ಪೀಠ ರದ್ದುಗೊಳಿಸಿದೆ.
ದೋಷಿಗಳು 14 ವರ್ಷ ಕಸ್ಟಡಿಯಲ್ಲಿ ಇದ್ದರು ಎಂದು ಪೀಠ ಉಲ್ಲೇಖಿಸಿದೆ.
ನಾಲ್ವರು ಆರೋಪಿಗಳು ಸಲ್ಲಿಸಿದ ಮೇಲ್ಮನವಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಉಚ್ಛ ನ್ಯಾಯಾಲಯ ಜನವರಿ 23ರಂದು ದಿಲ್ಲಿ ಪೊಲೀಸರಿಗೆ ಸೂಚಿಸಿತ್ತು.
ಪ್ರಮುಖ ಇಂಗ್ಲೀಷ್ ನ್ಯೂಸ್ ಚಾನೆಲ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿಶ್ವನಾಥನ್ ಅವರು ಕೆಲಸ ಮುಗಿಸಿ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಅವರನ್ನು ದಕ್ಷಿಣ ದಿಲ್ಲಿಯ ನೆಲ್ಸನ್ ಮಂಡೇಲಾ ಮಾರ್ಗದಲ್ಲಿ 2008 ಸೆಪ್ಟಂಬರ್ 30ರಂದು ಮುಂಜಾನೆ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು.