ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು.. : ಮೆಟಾ ಮುಖ್ಯಸ್ಥ ಮಾರ್ಕ್ ಝುಕರ್ ಬರ್ಗ್ ಗೆ ಸಮನ್ಸ್ ನೀಡಲು ಮುಂದಾದ ಸಂಸದೀಯ ಸ್ಥಾಯಿ ಸಮಿತಿ
ಹೊಸದಿಲ್ಲಿ: 2024ರ ಭಾರತದ ಸಾರ್ವತ್ರಿಕ ಚುನಾವಣೆಯ ಕುರಿತು ಮೆಟಾ ಮುಖ್ಯಸ್ಥ ಮಾರ್ಕ್ ಝುಕರ್ ಬರ್ಗ್ ನೀಡಿದ ಹೇಳಿಕೆಯ ವಿರುದ್ಧ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್ ನೀಡಲು ಮುಂದಾಗಿದೆ.
ಬಿಜೆಪಿ ಸಂಸದ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಮಿತಿಯ ಅಧ್ಯಕ್ಷ ನಿಶಿಕಾಂತ್ ದುಬೆ ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ನೀಡಿದ್ದು, ತಪ್ಪು ಮಾಹಿತಿ ಹರಡಿದ ಮಾರ್ಕ್ ಝುಕರ್ ಬರ್ಗ್ ಗೆ ಸಮನ್ಸ್ ನೀಡಲಾಗುವುದು. ಪ್ರಜಾಪ್ರಭುತ್ವ ದೇಶ ಭಾರತದ ಬಗ್ಗೆ ತಪ್ಪು ಮಾಹಿತಿ ನೀಡುವುದರಿಂದ ದೇಶದ ಘನತೆಗೆ ಧಕ್ಕೆಯಾಗಲಿದೆ. ಈ ತಪ್ಪಿಗಾಗಿ ಮೆಟಾ ಸಂಸ್ಥೆಯು ಸಂಸತ್ತಿನಲ್ಲಿ ಮತ್ತು ಭಾರತೀಯರಲ್ಲಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
ಜನವರಿ 10ರಂದು ಪಾಡ್ ಕ್ಯಾಸ್ಟ್ ಸಂದರ್ಶನದಲ್ಲಿ ಮಾತನಾಡಿದ್ದ ಫೇಸ್ಬುಕ್ ಸಹ-ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್, ಕೋವಿಡ್ ಸಾಂಕ್ರಾಮಿಕವು ವಿಶ್ವದಾದ್ಯಂತ ಅಧಿಕಾರದಲ್ಲಿರುವ ಸರ್ಕಾರಗಳ ಮೇಲಿನ ನಂಬಿಕೆ ಕೆಳೆದುಕೊಳ್ಳಲು ಕಾರಣವಾಗಿದೆ. ಅವರು ಭಾರತದ ಉದಾಹರಣೆಯನ್ನು ಉಲ್ಲೇಖಿಸಿದ್ದು, 2024 ಪ್ರಪಂಚದಾದ್ಯಂತ ಬಹಳ ದೊಡ್ಡ ಚುನಾವಣಾ ವರ್ಷವಾಗಿತ್ತು, ಭಾರತದಲ್ಲಿ ಚುನಾವಣೆಗಳು ನಡೆದಿತ್ತು. ಅಧಿಕಾರದಲ್ಲಿರುವವರು ಪ್ರತಿಯೊಂದು ಕಡೆಯೂ ಸೋತರು. ಇದು ಒಂದು ರೀತಿಯ ಜಾಗತಿಕ ವಿದ್ಯಮಾನವಿದೆ, ಅದು ಹಣದುಬ್ಬರ ಅಥವಾ ಕೋವಿಡ್ ಅನ್ನು ಎದುರಿಸಲು ಆರ್ಥಿಕ ನೀತಿಗಳು ಅಥವಾ ಸರ್ಕಾರಗಳು ಕೋವಿಡ್ ಅನ್ನು ಹೇಗೆ ನಿಭಾಯಿಸಿದವು ಎಂಬ ಕಾರಣದಿಂದಾಗಿರಬಹುದು. ಇದು ಜಾಗತಿಕವಾಗಿ ಈ ಪರಿಣಾಮ ಬೀರಿದೆ ಎಂದು ತೋರುತ್ತದೆ ಎಂದು ಝುಕರ್ ಬರ್ಗ್ ಹೇಳಿದ್ದಾರೆ.
ಇದಾದ ಕೆಲವೇ ದಿನಗಳಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಝಕರ್ ಬರ್ಗ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದು, ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಭಾರತೀಯರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೇಲೆ ತಮ್ಮ ವಿಶ್ವಾಸವನ್ನು ಪುನರುಚ್ಚರಿಸಿದ್ದಾರೆ. 2024ರ ಚುನಾವಣೆಯಲ್ಲಿ ಭಾರತ ಸೇರಿದಂತೆ ಹೆಚ್ಚಿನ ಅಧಿಕಾರದಲ್ಲಿರುವ ಸರ್ಕಾರಗಳು ಕೋವಿಡ್ ನಂತರ ಸೋತಿವೆ ಎಂಬ ಝುಕರ್ ಬರ್ಗ್ ಅವರ ಹೇಳಿಕೆಯು ವಾಸ್ತವಿಕವಾಗಿ ತಪ್ಪಾಗಿದೆ ಎಂದು ಹೇಳಿದ್ದರು.