ಜು. 22 ರಿಂದ ಸಂಸತ್‌ನ ಮುಂಗಾರು ಅಧಿವೇಶನ

Update: 2024-07-16 15:52 GMT

PC : PTI 

ಹೊಸದಿಲ್ಲಿ : ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರ ಆರಂಭಗೊಳ್ಳಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಕೇಂದ್ರ ಸರಕಾರವು ರವಿವಾರ (ಜುಲೈ 21) ದಂದು ಸರ್ವಪಕ್ಷ ಸಭೆಯನ್ನು ಕರೆದಿದೆ.

ಕಾಂಗ್ರೆಸ್ ಸಂಸದ ರಾಹುಲ್‌ಗಾಂಧಿ ಪ್ರತಿಪಕ್ಷ ನಾಯಕನಾಗಿ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಸತ್ ಮುಂಗಾರು ಅಧಿವೇಶನವು ಜುಲೈ 22ರಂದು ಆರಂಭಗೊಳ್ಳಲಿದ್ದು, ಆಗಸ್ಟ್ 12ರತನಕ ಮುಂದುವರಿಯಲಿದೆ. ಕೇಂದ್ರ ಬಜೆಟ್ ಜುಲೈ 23ರಂದು ಮಂಡನೆಯಾಗಲಿದೆ.

ಆದರೆ ತೃಣಮೂಲ ಕಾಂಗ್ರೆಸ್ ಪಕ್ಷವು ಹೇಳಿಕೆಯೊಂದನ್ನು ನೀಡಿ, ಜುಲೈ 21ನೇ ತಾರೀಕನ್ನು ತಾನು ಹುತಾತ್ಮರ ದಿನವಾಗಿ ಆಚರಿಸುತ್ತಿರುವುದರಿಂದ ತನ್ನ ಪಕ್ಷವು ಅದು ನಡೆಯಿರುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವುದಿಲ್ಲವೆಂದು ತಿಳಿಸಿದೆ.

1993ರಲ್ಲಿ ಪಶ್ಚಿಮ ಬಂಗಾಳ ಸರಕಾರದ ಕಾರ್ಯಾಲಯವಾದ ರೈಟರ್ಸ್ ಬಿಲ್ಡಿಂಗ್‌ಗೆ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೋಲ್ಕತಾ ಪೊಲೀಸರು ಗೋಲಿಬಾರ್ ನಡೆಸಿದ್ದರಿಂದ ಪಕ್ಷದ 13 ಕಾರ್ಯಕರ್ತರು ಮೃತಪಟ್ಟಿದ್ದರು. ಈ ಘಟನೆ ಸ್ಮರಣಾರ್ಥವಾಗಿ ಟಿಎಂಸಿ ಪ್ರತಿ ವರ್ಷ ಜುಲೈ 21 ಅನ್ನು ಹುತಾತ್ಮರ ದಿನವಾಗಿ ಆಚರಿಸುತ್ತಿದೆ. ಆ ಸಮಯದಲ್ಲಿ ಮಮತಾ ಬ್ಯಾನರ್ಜಿ ಅವರು ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿದ್ದರು. 1998ರ ಜನವರಿ 1ರಂದು ತೃಣಮೂಲ ಕಾಂಗ್ರೆಸ್ ಪಕ್ಷ ಸ್ಥಾಪನೆಯಾದ ಆನಂತರವೂ ಮಮತಾ ಬ್ಯಾನರ್ಜಿ ಅವರು ಘಟನೆಯ ಸ್ಮರಣಾರ್ಥವಾಗಿ ಪ್ರತಿ ವರ್ಷವೂ ಜುಲೈ 21ರಂದು ರ್ಯಾ ಲಿಯನ್ನು ನಡೆಸುತ್ತಾ ಬಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News