ಕಾನೂನು ಸಂಸ್ಥೆಗಳ ಕಾರ್ಯಾಚರಣೆಗೆ ನ್ಯಾಯಾಂಗ ಸ್ವಾತಂತ್ರ್ಯ ನಿರ್ಣಾಯಕ : ಐಸಿಜೆ ನ್ಯಾಯಾಧೀಶೆ
ಹೊಸದಿಲ್ಲಿ : ಕಾನೂನು ಸಂಸ್ಥೆಗಳ ಕಾರ್ಯಾಚರಣೆಗೆ, ವಿಶೇಷವಾಗಿ ರಾಜಕೀಯ ಅಸ್ಥಿರತೆಗಳ ಸಂದರ್ಭದಲ್ಲಿ ನ್ಯಾಯಾಂಗ ಸ್ವಾತಂತ್ರ್ಯವು ನಿರ್ಣಾಯಕವಾಗಿದೆ ಎಂದು ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ದ ನ್ಯಾಯಾಧೀಶೆ ನ್ಯಾ.ಹಿಲರಿ ಚಾರ್ಲ್ಸ್‌ವರ್ಥ್ ಅವರು ಶನಿವಾರ ಇಲ್ಲಿ ಹೇಳಿದರು. ಆಸ್ಟ್ರೇಲಿಯಾದ ಅಂತರರಾಷ್ಟ್ರೀಯ ನ್ಯಾಯವಾದಿಯಾಗಿರುವ ಅವರು 2021, ಜ.5ರಿಂದ ಐಸಿಜೆ ನ್ಯಾಯಾಧೀಶೆಯಾಗಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಆವರಣದಲ್ಲಿ ‘ಐಸಿಜೆ:ರಾಜಕೀಯ ಪರಿಸರದಲ್ಲಿ ಕಾನೂನು ವೇದಿಕೆ ’ ಕುರಿತು ಎರಡನೇ ವಾರ್ಷಿಕ ಉಪನ್ಯಾಸವನ್ನು ನೀಡಿದ ಚಾರ್ಲ್ಸ್‌ವರ್ಥ್ ಕುಲಭೂಷಣ ಜಾಧವ ಪ್ರಕರಣದಲ್ಲಿ ಐಸಿಜೆ ಪಾತ್ರವನ್ನು ಪ್ರಸ್ತಾಪಿಸಿ, ಐಸಿಜೆ ತೀರ್ಪು ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ನಿವಾರಿಸಿಲ್ಲವಾದರೂ ಅದು ಕನಿಷ್ಠ ಒಂದು ಪರಿಹಾರವನ್ನು, ಅದೂ ಉಭಯ ದೇಶಗಳ ನಡುವೆ ಬಿರುಕು ಮೂಡಿಸಿರುವ ತೀವ್ರ ಸಮಸ್ಯೆಗೆ ಕಾನೂನು ಪರಿಹಾರವನ್ನು ಒದಗಿಸಿದೆ ಎಂದು ಹೇಳಿದರು. 2017,ಎ.10ರಂದು ಪಾಕಿಸ್ತಾನದಲ್ಲಿಯ ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಜಾಧವ್‌ಗೆ ಮರಣದಂಡನೆಯನ್ನು ವಿಧಿಸಿತ್ತು. ಪ್ರಕರಣದಲ್ಲಿ ಅಂತಿಮ ತೀರ್ಪು ಬಾಕಿಯುಳಿದಿರುವಂತೆ ಐಸಿಜೆ ಮರಣದಂಡನೆಗೆ ತಡೆಯಾಜ್ಞೆಯನ್ನು ನೀಡಿತ್ತು.
ಜಾಧವ್ ಅವರ ವಿಚಾರಣೆ ಮತ್ತು ದೋಷನಿರ್ಣಯದ ಸಮಗ್ರ ಪ್ರಕ್ರಿಯೆಯನ್ನು ಪಾಕಿಸ್ತಾನವು ಪುನರ್‌ಪರಿಶೀಲಿಸಬೇಕು ಮತ್ತು ಭಾರತಕ್ಕೆ ಕಾನ್ಸುಲರ್ ಪ್ರವೇಶವನ್ನು ಒದಗಿಸಬೇಕು ಎಂದು ಐಸಿಜೆ ಎತ್ತಿ ಹಿಡಿದಿತ್ತು.
ಅಂತರರಾಷ್ಟ್ರೀಯ ಸನ್ನಿವೇಶದಲ್ಲಿ ನ್ಯಾಯಾಂಗ ಸ್ವಾತಂತ್ರ್ಯವು ನ್ಯಾಯಾಧೀಶರ ತಾರ್ಕಿಕತೆಯ ಮೇಲೆ ಪರಿಣಾಮ ಬೀರಬಹುದಾದ ಯಾವುದೇ ಕಾನೂನೇತರ ಪರಿಗಣನೆಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ ಎಂದು ಚಾರ್ಲ್ಸ್‌ವರ್ಥ್ ಹೇಳಿದರು.
ಭಾರತದ ಸರ್ವೋಚ್ಚ ನ್ಯಾಯಾಲಯದ ಸ್ವಾತಂತ್ರ್ಯದ ವಿಶಿಷ್ಟ ಇತಿಹಾಸದಿಂದ ಅಂತರರಾಷ್ಟ್ರೀಯ ನ್ಯಾಯಾಂಗವು ಸ್ಫೂರ್ತಿಯನ್ನು ಪಡೆಯಬಹುದಾಗಿದೆ ಎಂದ ಅವರು,‘ಭಾರತದ ಸುಪ್ರೀಂ ಕೋರ್ಟ್ ಮತ್ತು ಐಸಿಜೆ ಎರಡೂ ತುಂಬ ವಿಭಿನ್ನವಾಗಿದ್ದರೂ ಅವೆರಡೂ ಸರಿಸುಮಾರು ಒಂದೇ ವಯಸ್ಸಿನವು ಎನ್ನುವುದನ್ನು ನಾನು ಗಮನಿಸಿದ್ದೇನೆ. ಸುಪ್ರೀಂ ಕೋರ್ಟ್ ತನ್ನ 75ನೇ ವರ್ಷವನ್ನು ಪ್ರವೇಶಿಸುತ್ತಿದ್ದರೆ ಐಸಿಜೆ ತನ್ನ 78ನೇ ವರ್ಷವನ್ನು ಪ್ರವೇಶಿಸುತ್ತಿದೆ. ಆದರೆ ಉಭಯ ನ್ಯಾಯಾಲಯಗಳು ಹೆಚ್ಚು ಕಾವಿನಿಂದ ಕೂಡಿದ್ದ ರಾಜಕೀಯ ಪರಿಸರಗಳಿಗೆ ಮಾರ್ಗದರ್ಶನದ ಸವಾಲುಗಳನ್ನು ಎದುರಿಸಿವೆ ಎಂದರು. ‘ನನ್ನ ಮೇಲೆ ನಿಜಕ್ಕೂ ಪರಿಣಾಮ ಬೀರಿರುವುದು ಸುಪ್ರೀಂ ಕೋರ್ಟ್‌ನ ಆತ್ಮಾವಲೋಕನದ ಧೈರ್ಯದ ಸಾಮರ್ಥ್ಯವಾಗಿದೆ ’ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್‌ನ ಸಂಸ್ಥಾಪನಾ ದಿನದಂದು ಅದನ್ನು ಅಭಿನಂದಿಸಿದ ಚಾರ್ಲ್ಸ್‌ವರ್ಥ್, ಉತ್ತಮ ಭವಿಷ್ಯವನ್ನು ಹಾರೈಸಿದರು.