ಭಾರತದ ನೂತನ ಸಿಜೆಐ ಸಂಜೀವ್ ಖನ್ನಾ ಯಾರು?; ಅವರು ನೀಡಿದ್ದ ಮಹತ್ವದ ತೀರ್ಪುಗಳು ಯಾವುವು?: ಇಲ್ಲಿದೆ ಮಾಹಿತಿ...

Update: 2024-11-11 08:04 GMT

ನ್ಯಾಯಮೂರ್ತಿ ಸಂಜೀವ್‌ ಖನ್ನಾ (PTI)

ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಇಂದು ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನ್ಯಾ.ಖನ್ನಾ ಅವರನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸುವಂತೆ ನ್ಯಾ.ಚಂದ್ರಚೂಡ್ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಚುನಾವಣಾ ಬಾಂಡ್ ರದ್ದತಿ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿ ರದ್ದತಿ ಎತ್ತಿ ಹಿಡಿದಿದ್ದು ಸಹಿತ ಪ್ರಮುಖ ವಿಷಯಗಳ ತೀರ್ಪು ಪ್ರಕಟಿಸಿದ್ದ ನ್ಯಾ ಸಂಜೀವ್ ಖನ್ನಾ ಅವರು ಸುಪ್ರೀಂಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೋಮವಾರ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸಂಜೀವ್ ಖನ್ನಾ ಅವರು ರವಿವಾರ ನಿವೃತ್ತರಾದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಉತ್ತರಾಧಿಕಾರಿಯಾಗಿದ್ದಾರೆ. ಸಂಜೀವ್ ಖನ್ನಾ ಅವರಿಗೆ 6 ತಿಂಗಳ ಅಧಿಕಾರಾವಧಿ ಮಾತ್ರ ಇರಲಿದೆ. ಅವರು 2025 ಮೇ 13ರಂದು ನಿವೃತ್ತರಾಗಲಿದ್ದಾರೆ. ಅಕ್ಟೋಬರ್ 16ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಮಾಡಿದ ಶಿಫಾರಸಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಂಜೀವ್ ಖನ್ನಾ ಅವರನ್ನು ಮುಂದಿನ ಸಿಜೆಐಯಾಗಿ ನೇಮಕ ಮಾಡಿ ಅಕ್ಟೋಬರ್ 24ರಂದು ಅಧಿಸೂಚನೆ ಹೊರಡಿಸಿತ್ತು.

ಸಂಜೀವ್ ಖನ್ನಾ 1960ರ ಮೇ 14ರಂದು ದಿಲ್ಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಯಾದ ದೇವ್ ರಾಜ್ ಖನ್ನಾ ಅವರ ಮಗನಾಗಿ ಜನಿಸಿದರು. ಅವರ ತಾಯಿ ಸರೋಜ್ ಖನ್ನಾ ಅವರು ದಿಲ್ಲಿಯ ಶ್ರೀರಾಮ್ ಕಾಲೇಜಿನಲ್ಲಿ ಹಿಂದಿ ಅಧ್ಯಾಪಕರಾಗಿದ್ದರು. ಸಂಜೀವ್ ಖನ್ನಾ ದೆಹಲಿಯ ಪ್ರತಿಷ್ಠಿತ ಮಾಡರ್ನ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.

1980ರಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ಪ್ರತಿಷ್ಟಿತ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಪದವಿ ಮತ್ತು ನಂತರ ದೆಹಲಿ ವಿಶ್ವವಿದ್ಯಾಲಯದ ಕಾಂಪಸ್ ಲಾ ಸೆಂಟರ್ ನಿಂದ ಕಾನೂನು ಪದವಿ ಪಡೆದಿದ್ದಾರೆ. ಅವರು 1983 ರಲ್ಲಿ  ದಿಲ್ಲಿಯ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ದಾಖಲಾತಿ ಪಡೆದರು.

2004ರಲ್ಲಿ ದಿಲ್ಲಿ ಸರ್ಕಾರದ ಸ್ಥಾಯಿ ಸಲಹೆಗಾರರಾಗಿ (ಸಿವಿಲ್) ನೇಮಕಗೊಂಡಿದ್ದ ಅವರು, ದಿಲ್ಲಿ ಹೈಕೋರ್ಟ್‌ನಲ್ಲಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಮತ್ತು ಅಮಿಕಸ್ ಕ್ಯೂರಿ ಆಗಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಹಾಜರಾಗಿ, ವಾದಿಸಿದ್ದಾರೆ.

ಅವರ ಚಿಕ್ಕಪ್ಪ ಎಚ್.ಆರ್.ಖನ್ನಾ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು. ಎಚ್ ಆರ್ ಖನ್ನಾ ದೇಶ ಕಂಡ ಅತ್ಯಂತ ಗೌರವಾನ್ವಿತ ನ್ಯಾಯಮೂರ್ತಿಗಳಲ್ಲೊಬ್ಬರಾಗಿದ್ದರು .

ಎಚ್ ಆರ್ ಖನ್ನಾ 1973 ರಲ್ಲಿ ಸಂವಿಧಾನದ ಮೂಲಭೂತ ರಚನೆಯ ಸಿದ್ಧಾಂತವನ್ನು ಪ್ರತಿಪಾದಿಸಿದರು ಮತ್ತು 1976 ರಲ್ಲಿ ಹೇಬಿಯಸ್ ಕಾರ್ಪಸ್ ಕೇಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ADM ಜಬಲ್ಪುರ್ ವರ್ಸಸ್ ಶಿವಕಾಂತ್ ಶುಕ್ಲಾ ಪ್ರಕರಣದಲ್ಲಿ ಏಕಾಂಗಿ ಭಿನ್ನಾಭಿಪ್ರಾಯದ ತೀರ್ಪನ್ನು ನೀಡಿದ್ದರು. ಇದರಿಂದಾಗಿ ಅವರು ಮುಖ್ಯ ನ್ಯಾಯಾಧೀಶರ ಸ್ಥಾನವನ್ನು ಕಳೆದುಕೊಳ್ಳಬೇಕಾಗಿ ಬಂದಿತ್ತು.

ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಇಚ್ಛೆಯಂತೆ ಎಂ.ಎಚ್.ಬೇಗ್ ಅವರನ್ನು ಮುಖ್ಯ ನ್ಯಾಯಾಧೀಶರ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಇದನ್ನು ಪ್ರತಿಭಟಿಸಿ ಅವರು 1977 ರ ಆರಂಭದಲ್ಲಿ ರಾಜೀನಾಮೆ ನೀಡಿದ್ದರು.

ಎ ಡಿ ಎಂ ಜಬಲ್ಪುರ್ ಪ್ರಕರಣದಲ್ಲಿ ಇಂದಿರಾ ಗಾಂಧೀ ಸರ್ವಾಧಿಕಾರದ ವಿರುದ್ಧ ಅವರು ನಿರ್ಭೀತಿಯಿಂದ ನೀಡಿದ್ದ ಭಿನ್ನ ಮತ ತೀರ್ಪು ಭಾರತದ ನ್ಯಾಯಾಂಗ ಇತಿಹಾಸದ ಅತೀ ಹೆಚ್ಚು ಉಲ್ಲೇಖಸಲ್ಪಟ್ಟ ತೀರ್ಪುಗಳಲ್ಲೊಂದು. ಈ ಭಿನ್ನಮತದ ತೀರ್ಪಿನಿಂದಾಗಿ ಜಸ್ಟಿಸ್ ಖನ್ನಾ ಗೆ ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶ ಕೈತಪ್ಪಿತ್ತು ಎನ್ನಲಾಗಿದೆ.

2005 ರಲ್ಲಿ ಜಸ್ಟಿಸ್ ಸಂಜೀವ್ ಖನ್ನಾ ದಿಲ್ಲಿ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ್ದರು. ಅನಂತರ 2006ರಲ್ಲಿ ಅದೇ ಉಚ್ಚ ನ್ಯಾಯಾಲಯದ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2019 ಜನವರಿ 18ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು.

ಖನ್ನಾ ಅವರಿಗಿಂತ ಹಿರಿಯ 32 ಹೈಕೋರ್ಟ್ ನ್ಯಾಯಮೂರ್ತಿಗಳಿದ್ದರೂ ಅವರಿಗೆ ಭಡ್ತಿ ನೀಡಲಾಗಿತ್ತು. ಅವರ ಪದೋನ್ನತಿಯು ನ್ಯಾಯಾಂಗ ವಲಯಗಳಲ್ಲಿ ವಿವಾದವನ್ನು ಹುಟ್ಟುಹಾಕಿತ್ತು. ಆದರೂ , ಅವರ ನೇಮಕಾತಿಯನ್ನು ಭಾರತ ಸರ್ಕಾರವು ಅನುಮೋದಿಸಿತ್ತು.

ನ್ಯಾ.ಸಂಜೀವ್ ಖನ್ನಾ ಅವರು ಹಲವಾರು ಗಮನಾರ್ಹ ಮತ್ತು ಗಂಭೀರ ಪ್ರಕರಣಗಳಲ್ಲಿ ತೀರ್ಪು ನೀಡಿದ್ದ ನ್ಯಾಯಪೀಠಗಳ ಭಾಗವಾಗಿದ್ದವರು. ವಿವಿಪ್ಯಾಟ್ ಕುರಿತ ತೀರ್ಪು ಕೂಡ ಅವುಗಳಲ್ಲಿ ಒಂದು. ಇವಿಎಂ ಮತಗಳು ಮತ್ತು ವಿವಿಪ್ಯಾಟ್ ಮತಗಳನ್ನು ಪರಸ್ಪರ ಶೇ.100ರಷ್ಟು ಹೋಲಿಸಿ ನೋಡಬೇಕು ಎಂಬ ಮನವಿಯನ್ನು ನ್ಯಾ.ಸಂಜೀವ್ ಖನ್ನಾ ಮತ್ತು ನ್ಯಾ.ದೀಪಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠ ತಿರಸ್ಕರಿಸಿತ್ತು. ಇವಿಎಂ ವ್ಯವಸ್ಥೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಂದು ಪೀಠ ಹೇಳಿತ್ತು.

ಚುನಾವಣಾ ಬಾಂಡ್ ಯೋಜನೆ ಅಸಾಂವಿಧಾನಿಕ ಎಂಬ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿಯೂ ನ್ಯಾ.ಖನ್ನಾ ಪಾತ್ರವಿತ್ತು. ದಿಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದ್ದ ತೀರ್ಪು ಕೂಡ ಮಹತ್ವದ್ದಾಗಿದೆ. ಕೇಂದ್ರದ ಕೈಗೊಂಬೆಯೆಂದು ಸಿಬಿಐಗೆ ಚಾಟಿ ಬೀಸಿದ್ದಲ್ಲದೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಆ ತೀರ್ಪು ಎತ್ತಿಹಿಡಿದಿತ್ತು.

ಸುಪ್ರೀಂ ಕೋರ್ಟ್ ಕೂಡ ಆರ್ಟಿಐ ಅಡಿಯಲ್ಲಿ ಮಾಹಿತಿ ಒದಗಿಸಬೇಕು ಎಂಬುದು ನ್ಯಾ.ಖನ್ನಾ ನೀಡಿದ್ದ ಮತ್ತೊಂದು ಮಹತ್ವದ ತೀರ್ಪಾಗಿದೆ. ಆ ತೀರ್ಪು ನೀಡಿದ್ದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ನ್ಯಾ.ಖನ್ನಾ ಒಬ್ಬರಾಗಿದ್ದರು.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದ ತೀರ್ಪನ್ನು ಕೂಡ ನ್ಯಾ.ಖನ್ನಾ ನೀಡಿದ್ದರು.

ಪ್ರಕರಣಗಳು ಬಾಕಿ ಉಳಿಯುವುದನ್ನು ಕಡಿಮೆ ಮಾಡುವುದು ಹಾಗೂ ನ್ಯಾಯ ನೀಡುವುದನ್ನು ತ್ವರಿತಗೊಳಿಸುವುದು ನ್ಯಾ. ಸಂಜೀವ್ ಕುಮಾರ್ ಅವರ ಆದ್ಯತೆ ಎಂದು ಹೇಳಲಾಗುತ್ತಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News