ಭಾರತ vs ಪಾಕ್: ಯಾವ ಕ್ರಿಕೆಟ್ ತಂಡ ಉತ್ತಮ ಎಂಬ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರವೇನು?

ನರೇಂದ್ರ ಮೋದಿ | PC : X
ಹೊಸದಿಲ್ಲಿ: ಕ್ರಿಕೆಟ್ ಜಗತ್ತಿನಲ್ಲಿ ಆಸ್ಟ್ರೇಲಿಯ-ಇಂಗ್ಲೆಂಡ್ ಹಾಗೂ ಭಾರತ-ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಸಾಂಪ್ರದಾಯಿಕ ಜಿದ್ದಾಜಿದ್ದಿ ಸ್ಪರ್ಧೆ ಮನೆಮಾತಾಗಿದ್ದು, ಈ ಪೈಕಿ ಯಾವ ತಂಡ ಮತ್ತೊಂದು ತಂಡಕ್ಕಿಂತ ಉತ್ತಮ ಎಂಬ ಚರ್ಚೆಗೆ ಸುದೀರ್ಘ ಕಾಲದ ಇತಿಹಾಸವಿದೆ. ಆಸ್ಟ್ರೇಲಿಯ-ಇಂಗ್ಲೆಂಡ್ ತಂಡಗಳ ಹೋಲಿಕೆ ಬಂದಾಗ, ಆಸ್ಟ್ರೇಲಿಯ ಉತ್ತಮ ತಂಡ ಎಂದು ಸಲೀಸಾಗಿ ಹೇಳಬಲ್ಲ ಕ್ರಿಕೆಟ್ ಪ್ರೇಮಿಗಳು, ಅದೇ ಭಾರತ-ಪಾಕಿಸ್ತಾನ ತಂಡಗಳ ವಿಚಾರಕ್ಕೆ ಬಂದಾಗ ಕೊಂಚ ಗೊಂದಲಕ್ಕೊಳಗಾಗುತ್ತಾರೆ. ಭಾರತ-ಪಾಕಿಸ್ತಾನ ತಂಡಗಳ ನಡುವಿನ ಸ್ಪರ್ಧೆಯಲ್ಲಿ ಹೊರಹೊಮ್ಮಿರುವ ಒಟ್ಟಾರೆ ಫಲಿತಾಂಶಗಳಲ್ಲಿ ಪಾಕಿಸ್ತಾನ ತಂಡ ಮುಂಚೂಣಿಯಲ್ಲಿರುವುದು ಇದಕ್ಕೆ ಪ್ರಮುಖ ಕಾರಣ. ಆದರೆ, ಇತ್ತೀಚಿನ ದಿನಗಳಲ್ಲಿ ಐಸಿಸಿ ಆಯೋಜಿಸುವ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಭಾರತ ತಂಡ ನಿಸ್ಸಂಶಯವಾಗಿ ಪಾಕಿಸ್ತಾನ ತಂಡದ ವಿರುದ್ಧ ಮೇಲುಗೈ ಸಾಧಿಸುತ್ತಾ ಬಂದಿದ್ದು, ಇತ್ತೀಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿಯ ಲೀಗ್ ಪಂದ್ಯದಲ್ಲೂ ಭಾರತ ತಂಡವು ಪಾಕಿಸ್ತಾನ ತಂಡವನ್ನು ಸುಲಭವಾಗಿ ಮಣಿಸಿತ್ತು.
ರವಿವಾರ ಪ್ರಸಾರವಾದ ಅಮೆರಿಕದ ಪಾಡ್ ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ರೊಂದಿಗೆ ತಾವು ಪಾಲ್ಗೊಂಡಿದ್ದ ಪಾಡ್ ಕಾಸ್ಟ್ ನಲ್ಲಿ ಇದೇ ಹಿನ್ನೆಲೆಯನ್ನಿಟ್ಟುಕೊಂಡು ತಮ್ಮನ್ನು ಕೇಳಿದ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಜಾಣ್ಮೆಯ ಉತ್ತರ ನೀಡಿದ್ದಾರೆ. “ನಾನು ಕ್ರಿಕೆಟ್ ನ ತಾಂತ್ರಿಕ ವಿಷಯಗಳ ತಜ್ಞನಲ್ಲ. ಅದನ್ನು ಅದರಲ್ಲಿ ತಜ್ಞರಾಗಿರುವವರು ಮಾತ್ರ ತೀರ್ಮಾನಿಸಬಲ್ಲರು. ಯಾವ ತಂಡ ಉತ್ತಮ ಹಾಗೂ ಯಾವ ಆಟಗಾರ ಉತ್ತಮ ಎಂದು ಅವರು ಮಾತ್ರ ನಿರ್ಧರಿಸಬಲ್ಲರು. ಆದರೆ, ಕೆಲವೊಮ್ಮೆ ಫಲಿತಾಂಶಗಳೇ ವಾಸ್ತವವನ್ನು ಹೇಳುತ್ತವೆ. ಕೆಲ ದಿನಗಳ ಹಿಂದಷ್ಟೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆದಿತ್ತು ಹಾಗೂ ಆ ಪಂದ್ಯದ ಫಲಿತಾಂಶವೇ ಯಾವುದು ಉತ್ತಮ ತಂಡ ಎಂಬುದನ್ನು ಬಹಿರಂಗಗೊಳಿಸಿತ್ತು. ನಮಗೆ ತಿಳಿದಿರುವುದು ಅದೇ ರೀತಿಯಲ್ಲಿ” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ನಿಮ್ಮ ಪ್ರಕಾರ, ಸಾರ್ವಕಾಲಿಕ ಶ್ರೇಷ್ಠ ಫುಟ್ ಬಾಲ್ ಆಟಗಾರ ಯಾರು ಎಂಬ ಪ್ರಶ್ನೆಗೆ, ಎರಡು ವಿಭಿನ್ನ ತಲೆಮಾರಿನ ಡಿಯಾಗೊ ಮರಡೋನಾ ಹಾಗೂ ಲಿಯೊನೆಲ್ ಮೆಸ್ಸಿ ಉಳಿದೆಲ್ಲ ಫುಟ್ ಬಾಲ್ ಆಟಗಾರರಿಗಿಂತ ಶ್ರೇಷ್ಠ ಆಟಗಾರರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದ್ದಾರೆ.