'ಐಸಿಇ' ತನಗಾಗಿ ಹುಡುಕಾಡುತ್ತಿದ್ದಾಗ ಕೊಲಂಬಿಯಾ ವಿವಿಯ ಭಾರತೀಯ ವಿದ್ಯಾರ್ಥಿನಿ ಕೆನಡಾಕ್ಕೆ ಪರಾರಿಯಾಗಿದ್ದು ಹೇಗೆ?

ರಂಜನಿ ಶ್ರೀನಿವಾಸನ್ | PC : NDTV
ಹೊಸದಿಲ್ಲಿ: ಫೆಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ತನ್ನ ವಿದ್ಯಾರ್ಥಿ ವೀಸಾ ರದ್ದುಗೊಂಡ ಬಳಿಕ ಕೊಲಂಬಿಯಾ ವಿವಿಯ ಪಿಎಚ್ಡಿ ವಿದ್ಯಾರ್ಥಿನಿ ರಂಜನಿ ಶ್ರೀನಿವಾಸನ್ ಅವರು ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ಅಧಿಕಾರಿಗಳು ತನಗಾಗಿ ಹುಡುಕಾಡುತ್ತಿದ್ದಾಗಲೇ ಅಮೆರಿಕದಿಂದ ಪರಾರಿಯಾಗಿ ಕೆನಡಾ ಸೇರಿಕೊಂಡಿದ್ದರು.
ಹತ್ತು ದಿನಗಳ ಹಿಂದೆ ವಲಸೆ ಅಧಿಕಾರಿಗಳು ಮೊದಲ ಬಾರಿಗೆ ರಂಜನಿ ವಾಸವಾಗಿದ್ದ ಕೊಲಂಬಿಯಾ ವಿವಿಯ ಅಪಾರ್ಟ್ಮೆಂಟ್ ನ ಬಾಗಿಲು ಬಡಿದಿದ್ದರು. ತನ್ನ ವಿದ್ಯಾರ್ಥಿ ವೀಸಾ ರದ್ದುಗೊಂಡಿರುವುದನ್ನು ಅರಿತಿದ್ದ ರಂಜನಿ ಬಾಗಿಲು ತೆಗೆದಿರಲಿಲ್ಲ.
ಮರುದಿನ ರಾತ್ರಿ ಮತ್ತೆ ವಲಸೆ ಅಧಿಕಾರಿಗಳು ಅಪಾರ್ಟ್ಮೆಂಟ್ ಗೆ ಬಂದಾಗ ರಂಜನಿ ಮನೆಯಲ್ಲಿರಲಿಲ್ಲ. ಕೆಲವೇ ಗಂಟೆಗಳ ಮೊದಲು ವಿವಿಯ ಕ್ಯಾಂಪಸ್ ವಸತಿಗೃಹದಲ್ಲಿ ವಾಸವಾಗಿದ್ದ,ಫೆಲೆಸ್ತೀನ್ ಪರ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಮತ್ತು ಗ್ರೀನ್ ಕಾರ್ಡ್ ಹೊಂದಿದ್ದ ಮಹಮೂದ್ ಖಲೀಲ್ ರನ್ನು ಬಂಧಿಸಲಾಗಿತ್ತು. ಈ ನಡುವೆ ತನ್ನ ಕೆಲವು ವಸ್ತುಗಳನ್ನು ಪ್ಯಾಕ್ ಮಾಡಿದ ರಂಜನಿ ತಾನು ಸಾಕಿದ್ದ ಬೆಕ್ಕನ್ನು ಸ್ನೇಹಿತೆಯ ಬಳಿ ಬಿಟ್ಟು ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಕೆನಡಾಕ್ಕೆ ವಿಮಾನವನ್ನು ಹತ್ತಿದ್ದರು.
ಕಳೆದ ಗುರುವಾರ ರಾತ್ರಿ ನ್ಯಾಯಾಂಗ ವಾರಂಟ್ನೊಂದಿಗೆ ಮೂರನೇ ಬಾರಿ ಬಂದಿದ್ದ ವಲಸೆ ಅಧಿಕಾರಿಗಳು ಅಪಾರ್ಟ್ಮೆಂಟ್ ಪ್ರವೇಶಿಸಿದಾಗ ರಂಜನಿ ಅದಾಗಲೇ ಕೆನಡಾ ಸೇರಿಕೊಂಡಿದ್ದರು.
‘ವಾತಾವರಣವು ತುಂಬ ಅಸ್ಥಿರ ಮತ್ತು ಅಪಾಯಕಾರಿಯಾಗಿದ್ದಂತೆ ಕಂಡು ಬಂದಿತ್ತು, ಹೀಗಾಗಿ ನಾನು ತ್ವರಿತ ನಿರ್ಧಾರವನ್ನು ತೆಗೆದುಕೊಂಡಿದ್ದೆ’ ಎಂದು ರಂಜನಿ(37) ಅಮೆರಿಕ ತೊರೆದ ಬಳಿಕ ತನ್ನ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ ಶುಕ್ರವಾರ ‘ದಿ ನ್ಯೂಯಾರ್ಕ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಫುಲ್ಬ್ರೈಟ್ ಸ್ಕಾಲರ್ಶಿಪ್ನೊಂದಿಗೆ ನಗರ ಯೋಜನೆಯಲ್ಲಿ ಪಿಎಚ್ಡಿಗಾಗಿ ಐದನೇ ವರ್ಷದ ವ್ಯಾಸಂಗ ಮಾಡುತ್ತಿದ್ದ ರಂಜನಿ ಮೇ ತಿಂಗಳಲ್ಲಿ ಪದವಿಯನ್ನು ಪಡೆಯಲಿದ್ದರು. ಆದರೆ ದುರದೃಷ್ಟವಶಾತ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಡರಲ್ ವಲಸೆ ಅಧಿಕಾರಗಳ ಮೂಲಕ ಫೆಲೆಸ್ತೀನ್ ಪರ ಪ್ರತಿಭಟನಾಕಾರರ ವಿರುದ್ಧ ಕೈಗೊಂಡ ಕಠಿಣ ಕ್ರಮಗಳ ಬಲೆಯಲ್ಲಿ ಸಿಕ್ಕಿಬಿದ್ದಿದ್ದರು. ಇತ್ತೀಚಿನ ದಿನಗಳಲ್ಲಿ ವಲಸೆ ಮತ್ತು ಕಸ್ಟಮ್ಸ್ ಜಾರಿ(ಐಸಿಇ) ಸಂಸ್ಥೆಯು ಗುರಿಯಾಗಿಸಿಕೊಂಡಿದ್ದ ಕೊಲಂಬಿಯಾ ವಿವಿಯ ಕೆಲವೇ ವಿದ್ಯಾರ್ಥಿಗಳಲ್ಲಿ ರಂಜನಿ ಒಬ್ಬರಾಗಿದ್ದರು.
ವಲಸೆ ಅಧಿಕಾರಿಗಳು ತನ್ನ ಅಪಾರ್ಟ್ಮೆಂಟ್ ನ ಬಾಗಿಲನ್ನು ಮೊದಲ ಬಾರಿಗೆ ಬಡಿದ ನಂತರದ ವಾರವಿಡೀ ವಿದೇಶಾಂಗ ಇಲಾಖೆಯು ಯಾವುದೇ ವಿವರಣೆಯನ್ನು ನೀಡದೇ ಹಠಾತ್ತನೆ ತನ್ನ ವಿದ್ಯಾರ್ಥಿ ವೀಸಾವನ್ನು ರದ್ದುಗೊಳಿಸಿದ್ದು ಏಕೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ತಾನು ಕಷ್ಟಪಟ್ಟಿದ್ದೆ ಎಂದು ರಂಜನಿ ಹೇಳಿದ್ದಾರೆ. ವಿದ್ಯಾರ್ಥಿ ವೀಸಾ ರದ್ದುಗೊಂಡಿದ್ದರಿಂದ ಕೊಲಂಬಿಯಾ ವಿವಿಯು ರಂಜನಿಯವರ ಪ್ರವೇಶವನ್ನು ಹಿಂದೆಗೆದುಕೊಂಡಿತ್ತು.
ಶುಕ್ರವಾರ ಕೆನಡಾದಲ್ಲಿ ತನ್ನ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾಗ ರಂಜನಿಯವರಿಗೆ ಕೆಲವು ಉತ್ತರಗಳು ಸಿಕ್ಕಿದವು.
ಆಂತರಿಕ ಭದ್ರತಾ ಇಲಾಖೆಯು ಹೊರಡಿಸಿದ್ದ ಹೇಳಿಕೆಯಲ್ಲಿ ರಂಜನಿಯವರನ್ನು ಭಯೋತ್ಪಾದಕರ ಪರ ಸಹಾನುಭೂತಿಯನ್ನು ಹೊಂದಿರುವ ವ್ಯಕ್ತಿ ಎಂದು ಬಣ್ಣಿಸಿತ್ತು ಮತ್ತು ಅವರು ಹಿಂಸೆಯನ್ನು ಪ್ರತಿಪಾದಿಸುತ್ತಿದ್ದಾರೆ, ಭಯೋತ್ಪಾದಕ ಸಂಘಟನೆ ಹಮಾಸ್ ಅನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿತ್ತು. ಆದರೆ ಅದು ತನ್ನ ಆರೋಪಗಳಿಗೆ ಯಾವುದೇ ಪುರಾವೆಗಳನ್ನು ಒದಗಿಸಿರಲಿಲ್ಲ.
ಕೆನಡಾಕ್ಕೆ ಪರಾರಿಯಾಗುತ್ತಿದ್ದಾಗ ರಂಜನಿ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ತನ್ನ ಸೂಟ್ಕೇಸ್ ಅನ್ನು ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸುವ ವೀಡಿಯೊ ತುಣುಕನ್ನು ಪೋಸ್ಟ್ ಮಾಡಿದ್ದ ಆಂತರಿಕ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್,ರಂಜನಿ ನಿರ್ಗಮನವನ್ನು ‘ಸ್ವಯಂ-ಗಡಿಪಾರು’ ಎಂದು ಸಂಭ್ರಮಿಸಿದ್ದರು.
ಅಮೆರಿಕದಲ್ಲಿ ವಾಸವಾಗಿರಲು ಮತ್ತು ಅಧ್ಯಯನ ಮಾಡಲು ವೀಸಾ ನೀಡುವುದು ಒಂದು ಸವಲತ್ತು ಆಗಿದೆ ಎಂದು ಎಕ್ಸ್ನಲ್ಲಿ ಬರೆದಿರುವ ನೋಯೆಮ್, ನೀವು ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸಿದಾಗ ಆ ಸವಲತ್ತನ್ನು ರದ್ದುಗೊಳಿಸಬೇಕು ಮತ್ತು ನೀವು ಈ ದೇಶದಲ್ಲಿ ಇರಕೂಡದು ಎಂದು ಹೇಳಿದ್ದಾರೆ.
ಈ ಆರೋಪಗಳನ್ನು ಬಲವಾಗಿ ನಿರಾಕರಿಸಿರುವ ರಂಜನಿ ಪರ ವಕೀಲರು ಟ್ರಂಪ್ ಆಡಳಿತವು ‘ರಕ್ಷಿತ ರಾಜಕೀಯ ಭಾಷಣ’ದಲ್ಲಿ ತೊಡಗಿಕೊಂಡಿದ್ದಕ್ಕಾಗಿ ಅವರ ವೀಸಾವನ್ನು ರದ್ದುಗೊಳಿಸಿದೆ ಮತ್ತು ಅದನ್ನು ಪ್ರಶ್ನಿಸಲು ‘ಯಾವುದೇ ಅರ್ಥಪೂರ್ಣ ಪ್ರಕ್ರಿಯೆ’ಯನ್ನು ಅವರಿಗೆ ನಿರಾಕರಿಸಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಂತರಿಕ ಸುರಕ್ಷತಾ ಇಲಾಖೆ ಕಳೆದ ವರ್ಷ ತನ್ನ ವೀಸಾ ನವೀಕರಿಸುವಾಗ ರಂಜನಿ ಕೊಲಂಬಿಯಾ ವಿವಿ ಕ್ಯಾಂಪಸ್ ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿ ಆಕೆಗೆ ನೀಡಲಾಗಿದ್ದ ಎರಡು ಸಮನ್ಸ್ ಗಳ ಕುರಿತು ಮಾಹಿತಿ ನೀಡಿರಲಿಲ್ಲ. ಆದರೆ ಈ ಸಮನ್ಸ್ ಗಳು ಆಕೆಯನ್ನು ಭಯೋತ್ಪಾದಕರ ಬೆಂಬಲಿಯಾ ಆಗಿಸುವುದು ಹೇಗೆ ಎಂದು ಅಧಿಕಾರಿಗಳು ಹೇಳಿಲ್ಲ.
ತೀರಾ ಸಣ್ಣ ಪುಟ್ಟ ರಾಜಕೀಯ ಭಾಷಣ ಮಾಡಿದರೆ ಅಥವಾ ನಾವೆಲ್ಲ ಸಾಮಾನ್ಯವಾಗಿ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಅಸಮಾಧಾನ ಹೊರ ಹಾಕಿದರೂ ನಮ್ಮನ್ನು ಭಯೋತ್ಪಾದಕರ ಬೆಂಬಲಿಗರು ಎಂದು ಹಣೆಪಟ್ಟಿ ಹಚ್ಚುವಲ್ಲಿಗೆ ಹೋಗಿ ತಲುಪುತ್ತದೆ, ಕೊನೆಗದು ನಮ್ಮ ಜೀವ ಹಾಗು ಸುರಕ್ಷತೆಗೆ ಬೆದರಿಕೆ ಒಡ್ಡುವಲ್ಲಿಗೆ ತಲುಪುವ ಬಗ್ಗೆ ನನಗೆ ಭಯವಿದೆ ಎಂದು ರಂಜನಿ ನ್ಯೂ ಯಾರ್ಕ್ ಟೈಮ್ಸ್ ಗೆ ಹೇಳಿದ್ದಾರೆ.
ತನ್ನ ವಿರುದ್ಧ ಸಮನ್ಸ್ ಕೊಟ್ಟಿದ್ದ ಕೇಸುಗಳು ಮುಗಿದು ತಾನು ಅಪರಾಧಿ ಎಂದು ತೀರ್ಪು ಬರದೇ ಇದ್ದಿದ್ದರಿಂದ ವೀಸಾ ನವೀಕರಣದ ಸಂದರ್ಭದಲ್ಲಿ ಅದನ್ನು ಹೇಳಬೇಕು ಎಂದು ನನಗಾಣಿಸಲಿಲ್ಲ ಎಂದು ರಂಜನಿ ಹೇಳಿದ್ದಾರೆ.
ಕಳೆದ ವರ್ಷ ಫೆಲೆಸ್ತೀನ್ ಪರ ಪ್ರತಿಭಟನಾಕಾರರು ಕೊಲಂಬಿಯಾ ವಿವಿಯ ಹ್ಯಾಮಿಲ್ಟನ್ ಹಾಲ್ ಅನ್ನು ಆಕ್ರಮಿಸಿಕೊಂಡಾಗ ವಿವಿ ಕ್ಯಾಂಪಸ್ನ ಪ್ರವೇಶ ದ್ವಾರದ ಬಳಿ ರಂಜನಿಯವರನ್ನು ಬಂಧಿಸಲಾಗಿತ್ತು.
ತಾನು ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ,ಆದರೆ ಸಂಜೆ ಸ್ನೇಹಿತರೊಂದಿಗೆ ಪಿಕ್ನಿಕ್ ಬಳಿಕ ತನ್ನ ಅಪಾರ್ಟ್ಮೆಂಟ್ ಗೆ ಮರಳುತ್ತಿದ್ದ ಸಂದರ್ಭ ಪ್ರತಿಭಟನಾಕಾರರ ಗುಂಪು ಮತ್ತು ಬ್ಯಾರಿಕೇಡ್ಗಳ ಮೂಲಕ ಹಾದು ಹೋಗುತ್ತಿದ್ದಾಗ ಪೋಲಿಸರು ತನ್ನನ್ನು ತಳ್ಳಿದ್ದರು ಮತ್ತು ತನ್ನನ್ನು ಬಂಧಿಸಿದ್ದರು ಎಂದು ರಂಜನಿ ಸಂದರ್ಶನದಲ್ಲಿ ಸ್ಪಷ್ಟ ಪಡಿಸಿದ್ದಾರೆ.
ರಂಜನಿಯವರನ್ನು ಅಲ್ಪಾವಧಿಗೆ ಬಂಧಿಸಲಾಗಿತ್ತು. ವಾಹನಗಳ ಅಥವಾ ಪಾದಚಾರಿಗಳ ಸಂಚಾರಕ್ಕೆ ಅಡ್ಡಿ ಪಡಿಸಿದ್ದಕ್ಕಾಗಿ ಮತ್ತು ಚದುರಲು ನಿರಾಕರಿಸಿದ್ದಕ್ಕಾಗಿ ಅವರಿಗೆ ಎರಡು ಸಮನ್ಸ್ ನೀಡಲಾಗಿತ್ತು. ರಂಜನಿಯವರ ವಕೀಲರು ಮತ್ತು ನ್ಯಾಯಾಲಯದ ದಾಖಲೆಗಳ ಪ್ರಕಾರ ಅವರ ಪ್ರಕರಣವನ್ನು ತ್ವರಿತವಾಗಿ ವಜಾಗೊಳಿಸಲಾಗಿತ್ತು ಮತ್ತು ಯಾವುದೇ ಕ್ರಿಮಿನಲ್ ದಾಖಲೆಗೆ ಕಾರಣವಾಗಿರಲಿಲ್ಲ.
ಮೊನ್ನೆ ಬಂಧಿತರಾದ ಫೆಲೆಸ್ತೀನಿ ಹೋರಾಟಗಾರ ಮಹಮೂದ್ ಖಲೀಲ್ ರಂತೆ ನಾನು ಯಾವುದೇ ಸಂಘಟನೆಯ ಕಾರ್ಯಕರ್ತೆಯಾಗಿರಲಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಗಾಝಾದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳಿಗೆ ಸಂಬಂಧಿಸಿದ ಪೋಸ್ಟ್ ಗಳಿಗೆ ಲೈಕ್ ಹಾಕುತ್ತಿದ್ದೆ. ಜೊತೆಗೆ ಮಾನವ ಹಕ್ಕು ಉಲ್ಲಂಘನೆಯನ್ನು ವಿರೋಧಿಸುವ ಬಹಿರಂಗ ಪತ್ರಗಳಿಗೆ ಸಹಿ ಹಾಕುತ್ತಿದ್ದೆ.
ಟ್ರಂಪ್ ಅಮೇರಿಕಾದಲ್ಲಿ ಫೆಲೆಸ್ತೀನ್ ಪರ ಇರುವವರನ್ನು ಹೆಡೆಮುರಿ ಕಟ್ಟಿ ಗಡಿಪಾರು ಮಾಡುವ ಉಮೇದಿನಲ್ಲಿದ್ದಾರೆ. ಈಗಾಗಲೇ ಯಹೂದಿ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಹೊರಿಸಿ ಕೊಲಂಬಿಯಾ ವಿವಿಗೆ ನಾನೂರು ಮಿಲಿಯನ್ ಡಾಲರ್ ಅನುದಾನವನ್ನು ರದ್ದು ಪಡಿಸಿದ್ದಾರೆ. ಟ್ರಂಪ್ ರ ಈ ನೀತಿಯನ್ನು ಈ ಹಿಂದಿನ ಬೈಡನ್ ಆಡಳಿತದಲ್ಲಿದ್ದವರು ಕಟುವಾಗಿ ಟೀಕಿಸಿದ್ದಾರೆ.