ಉತ್ತರಪ್ರದೇಶ | ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ : ಶಿಸ್ತುಪಾಲನಾಧಿಕಾರಿಯ ಮುಖವಾಡ ಬಹಿರಂಗಪಡಿಸಿದ ಅನಾಮಧೇಯ ಪತ್ರ!

Update: 2025-03-17 19:49 IST
ಉತ್ತರಪ್ರದೇಶ | ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ : ಶಿಸ್ತುಪಾಲನಾಧಿಕಾರಿಯ ಮುಖವಾಡ ಬಹಿರಂಗಪಡಿಸಿದ ಅನಾಮಧೇಯ ಪತ್ರ!

Photo |NDTV

  • whatsapp icon

ಲಕ್ನೋ : ಉತ್ತರಪ್ರದೇಶದ ಹತ್ರಾಸ್‌ನಲ್ಲಿ ಕಾಲೇಜೊಂದರ ಪ್ರಾಧ್ಯಪಕನ ವಿರುದ್ಧ ವಿದ್ಯಾರ್ಥಿನಿಯರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಕಾಲೇಜಿನ ಶಿಸ್ತುಪಾಲನಾಧಿಕಾರಿಯೂ ಆಗಿರುವ ಪ್ರಾಧ್ಯಪಕನ ಅನುಚಿತ ವರ್ತನೆಯ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಪ್ರಾಧ್ಯಪಕನ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ.

ಹತ್ರಾಸ್‌ನಲ್ಲಿ ಸೇಠ್ ಫೂಲ್ ಚಂದ್ ಬಾಗ್ಲಾ ಎಂಬ ಕಾಲೇಜಿನ ಪ್ರಾಧ್ಯಪಕ ರಜನೀಶ್ ಕುಮಾರ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಆರೋಪದ ಬೆನ್ನಲ್ಲೇ ಆತನನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.

ಕಾಲೇಜಿನ ಶಿಸ್ತುಪಾಲನಾಧಿಕಾರಿಯ ಮುಖವಾಡ ಬಹಿರಂಗಪಡಿಸಿದ ಅನಾಮಧೇಯ ಪತ್ರ!

10 ತಿಂಗಳ ಹಿಂದೆ ಹತ್ರಾಸ್ ಪೊಲೀಸರಿಗೆ ಅನಾಮಧೇಯ ಪತ್ರವೊಂದು ಬಂದಿದೆ. ಪ್ರೊಫೆಸರ್ ರಜನೀಶ್ ಕುಮಾರ್ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ನೀಡುವ ಮತ್ತು ಉದ್ಯೋಗಾವಕಾಶವನ್ನು ಕಲ್ಪಿಸುವ ಆಮಿಷವೊಡ್ಡಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದಲ್ಲದೆ, ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು.

ಇತ್ತೀಚೆಗೆ ಎನ್‌ಡಿಟಿವಿ ಕೂಡ ಇಂತಹದ್ದೇ ಅನಾಮಧೇಯ ಪತ್ರವನ್ನು ಸ್ವೀಕರಿಸಿದೆ. ʼಅದರಲ್ಲಿ ನಾನು ಎಲ್ಲಾ ಅಧಿಕಾರಿಗಳಿಗೆ ಇದೇ ರೀತಿಯ ಪತ್ರವನ್ನು ಬರೆದಿದ್ದೇನೆ ಮತ್ತು ಸಹಾಯವನ್ನು ಕೋರಿದ್ದೇನೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾನು ನನ್ನ ನಿಜವಾದ ಹೆಸರನ್ನು ಬಳಸಿಲ್ಲ. ಏಕೆಂದರೆ ಈ ಪ್ರೊಫೆಸರ್ ನನ್ನನ್ನು ಕೊಲೆ ಮಾಡುವ ಸಾಧ್ಯತೆ ಇದೆ. ಆದರೆ, ನನಗೆ ಅರ್ಥವಾಗದ ವಿಷಯವೆಂದರೆ ನಾನು ಲಗತ್ತಿಸಿರುವ ಚಿತ್ರಗಳು ಅವನ ಅಪರಾಧವನ್ನು ಸಾಬೀತುಪಡಿಸುವುದಿಲ್ಲವೇ?ʼ ಎಂದು ಪ್ರಶ್ನಿಸಲಾಗಿತ್ತು.

59 ಅಶ್ಲೀಲ ವೀಡಿಯೊಗಳು!

ಅನಾಮಧೇಯ ದೂರುಗಳೊಂದಿಗೆ ರಜನೀಶ್ ಕುಮಾರ್ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸುವ 59 ವೀಡಿಯೊಗಳಿರುವ ಪೆನ್ ಡ್ರೈವ್ ಕೂಡ ಲಗತ್ತಿಸಲಾಗಿತ್ತು. ವೀಡಿಯೊದಲ್ಲಿ ವಿದ್ಯಾರ್ಥಿಗಳ ಮುಖವನ್ನು ಮರೆಮಾಡಲಾಗಿದೆ. ಕುಮಾರ್ ಕ್ಯಾಮೆರಾದಲ್ಲಿ ಕೃತ್ಯಗಳನ್ನು ರೆಕಾರ್ಡ್ ಮಾಡಿ ನಂತರ ಸಂತ್ರಸ್ತರನ್ನು ಮತ್ತೆ ತನ್ನ ಕೃತ್ಯಕ್ಕೆ ಸಹಕರಿಸುವಂತೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಎಂದು ಪತ್ರದಲ್ಲಿ ಆರೋಪಿಸಲಾಗಿತ್ತು.

ಎನ್‌ಡಿಟಿವಿಗೆ ಬರೆದ ಪತ್ರದಲ್ಲಿ ಕುಮಾರ್ ಹಲವು ಮಹಿಳೆಯರ ಮೇಲೆ ಇದೇ ರೀತಿ ದೌರ್ಜನ್ಯ ಎಸಗಿದ್ದಾನೆ, ಕಾಲೇಜು ಆಡಳಿತದಲ್ಲಿರುವ ಕೆಲವರು ಆತನೊಂದಿಗೆ ಕೈಜೋಡಿಸಿದ್ದಾರೆ ಎಂದು ದೂರುದಾರರು ಆರೋಪಿಸಿದರು.

ರಜನೀಶ್ ಕುಮಾರ್ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಪ್ರೊಫೆಸರ್ ರಜನೀಶ್ ಕುಮಾರ್ ಪರಾರಿಯಾಗಿದ್ದಾನೆ. ಆತನ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ. ಆತನಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸರಿಗೆ ದೊಡ್ಡ ಸವಾಲು

ಪೊಲೀಸರ ಪ್ರಕಾರ, ಈ ಬಗ್ಗೆ ಯಾರು ಕೂಡ ಪೊಲೀಸ್ ದೂರು ನೀಡಿಲ್ಲ. ವೀಡಿಯೋಗಳು 2023ರ ಹಿಂದಿನದು. ದೂರುದಾರರು ತಮ್ಮ ಗುರುತನ್ನು ಬಹಿರಂಗಪಡಿಸಲು ಹೆದರುತ್ತಿದ್ದಾರೆ. ಕುಮಾರ್‌ನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯಾವುದೇ ವಿದ್ಯಾರ್ಥಿಯು ಮುಂದೆ ಬಂದು ಈ ಬಗ್ಗೆ ದೂರು ನೀಡಿಲ್ಲ ಎಂದು ಪೊಲೀಸರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News