ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದತಿಗೆ ಕರ್ನಾಟಕದ ಮನವಿ ಪರಿಶೀಲಿಸಲಾಗುತ್ತಿದೆ ಎಂದ ವಿದೇಶಾಂಗ ಸಚಿವಾಲಯ
ಹೊಸದಿಲ್ಲಿ: ಲೈಂಗಿಕ ಹಗರಣದಲ್ಲಿ ಆರೋಪಿಯಾಗಿರುವ ಉಚ್ಚಾಟಿತ ಜೆಡಿಎಸ್(ನಾಯಕ), ಹಾಸನ ಸಂಸದ ಹಾಗೂ ಅಲ್ಲಿನ ಎನ್‌ಡಿಎ ಲೋಕಸಭಾ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಲು ಕರ್ನಾಟಕ ಸರ್ಕಾರ ಮಾಡಿದ ಮನವಿಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕ್ರಿಯೆಗೊಳಿಸುತ್ತಿದೆ ಎಂದು ವರದಿಯಾಗಿದೆ.
ಕರ್ನಾಟಕ ಸರ್ಕಾರ ಬರೆದಿರುವ ಪತ್ರ ಸಿಕ್ಕಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ, ಹಾಸನದಲ್ಲಿ ಚುನಾವಣೆ ನಡೆದ ಮರುದಿನ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಪಲಾಯನಗೈದಿದ್ದು ಇಲ್ಲಿಯ ತನಕ ಸ್ವದೇಶಕ್ಕೆ ವಾಪಸಾಗಿಲ್ಲ.
ಕೇಂದ್ರ ಸರ್ಕಾರವು ಕರ್ನಾಟಕದ ಮನವಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಬುಧವಾರ ಹೇಳಿದ್ದರು. ಪ್ರಜ್ವಲ್ ವಿರುದ್ಧ ಈಗಾಗಲೇ ಬಂಧನ ವಾರಂಟ್ ಜಾರಿಯಾಗಿದೆ.
ಕಳೆದ ಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ವಾರಂಟ್ ಜಾರಿಗೊಳಿಸಿದೆ.
ಈ ವಿವಾದದ ಕುರಿತು ಈ ಹಿಂದೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವಾಲಯದ ವಕ್ತಾರರು, ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಜರ್ಮನಿಗೆ ತೆರಳಿದ್ದಾರೆ ಎಂದು ಹೇಳಿದ್ದರು ಹಾಗೂ ಅದಕ್ಕಾಗಿ ಅವರು ಕೇಂದ್ರದ ಅನುಮತಿ ಕೋರಿರಲಿಲ್ಲ ಎಂದೂ ತಿಳಿಸಿದ್ದರು.