ಕಚ್ಚತೀವು ವಿವಾದವನ್ನು 50 ವರ್ಷಗಳ ಹಿಂದೆ ಬಗೆಹರಿಸಲಾಗಿದೆ, ಮತ್ತೆ ಪ್ರಸ್ತಾಪಿಸುವ ಅಗತ್ಯವಿಲ್ಲ: ಶ್ರೀಲಂಕಾ
ಹೊಸದಿಲ್ಲಿ: ಕಚ್ಚತೀವು ದ್ವೀಪ ಕುರಿತ ವಿವಾದವನ್ನು 50 ವರ್ಷಗಳ ಹಿಂದೆ ಇತ್ಯರ್ಥಪಡಿಸಲಾಗಿತ್ತು, ಆ ವಿಚಾರ ಮತ್ತೆ ಪ್ರಸ್ತಾಪಿಸುವ ಅಗತ್ಯವಿಲ್ಲ ಎಂದು ಶ್ರೀಲಂಕಾದ ವಿದೇಶ ಸಚಿವ ಅಲಿ ಸಬ್ರಿ ಹೇಳಿದ್ದಾರೆ.
ಭಾರತವು 1974ರಲ್ಲಿ ಆಗಿನ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿತ್ತು ಎಂಬ ವಿಚಾರ ಮುಂದಿಟ್ಟುಕೊಂಡು ಇತ್ತೀಚೆಗೆ ಭಾರತದಲ್ಲಿ ಉಂಟಾಗಿರುವ ವಿವಾದದ ಕುರಿತು ಅವರು ಪ್ರತಿಕ್ರಿಯಿಸುತ್ತಿದ್ದರು.
“ಯಾವುದೇ ವಿವಾದವಿಲ್ಲ,” ಎಂದು ಈ ಕುರಿತು ಕೇಳಿದಾಗ ಅಲಿ ಸಬ್ರಿ ಹೇಳಿದರು. ಯಾರು ಕಾರಣರು ಎಂಬ ಬಗ್ಗೆ ಅವರು (ಭಾರತ) ಆಂತರಿಕ ರಾಜಕೀಯ ಚರ್ಚೆ ನಡೆಸುತ್ತಿದ್ದಾರೆ. ಅದರ ಹೊರತಾಗಿ ಕಚ್ಚತೀವು ಅನ್ನು ಪಡೆಯುವ ಕುರಿತು ಯಾರೂ ಮಾತನಾಡುತ್ತಿಲ್ಲ,” ಎಂದು ಅವರು ಹೇಳಿದರು.
ಕಾಂಗ್ರೆಸ್‌ನ ಹಿಂದಿನ ಆಡಳಿತವು ಬೇಜವಾಬ್ದಾರಿಯಿಂದ ಈ ದ್ವೀಪವನ್ನು ಶ್ರೀಲಂಕಾಗೆ ನೀಡಿತ್ತೆಂದು ಕೆಲ ದಾಖಲೆಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದರು.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಆರ್‌ಟಿಐ ಅರ್ಜಿ ಸಲ್ಲಿಸಿ ಪಡೆದ ಮಾಹಿತಿಯನ್ನಾಧರಿಸಿ ಪ್ರಧಾನಿ ತಮ್ಮ ಹೇಳಿಕೆ ನೀಡಿದ್ದರು.