ಸಿಎಎ ವಿರುದ್ಧ ಕಾನೂನು ಕ್ರಮಕ್ಕೆ ಕೇರಳ ಸಂಪುಟ ನಿರ್ಧಾರ
ತಿರುವನಂತಪುರ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರಾಜ್ಯ ಸರಕಾರದ ನಿಲುವಿಗೆ ಅನುಗುಣವಾಗಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಸಂಪುಟ ಬುಧವಾರ ನಿರ್ಧರಿಸಿದೆ.
ಸುಪ್ರೀಂ ಕೋರ್ಟ್ ನಲ್ಲಿ ಇರುವ ಮೂಲ ಮೊಕದ್ದಮೆ ಜೊತೆಗೆ ಈ ವಿಷಯದ ಕುರಿತಂತೆ ಕಾನೂನು ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಅಡ್ವೊಕೇಟ್ ಜನರಲ್ ಅವರಿಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಅವರ ಕಚೇರಿ ಹೊರಡಿಸಿದ ಅಧಿಕೃತ ಹೇಳಿಕೆ ತಿಳಿಸಿದೆ.
‘‘ರಾಜ್ಯ ಸರಕಾರ ಈಗಾಗಲೇ ಸಂವಿಧಾನದ ಕಲಂ 131ರ ಅಡಿಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ಮೂಲ ಮೊಕದ್ದಮೆ ದಾಖಲಿಸಿದೆ. ಕೇಂದ್ರ ಸರಕಾರ ಸಿಎಎ ಅಡಿಯಲ್ಲಿ ನಿಯಮಗಳ ಅಧಿಸೂಚನೆ ನೀಡುವ ಮೂಲಕ ಮುಂದುವರಿದಿರುವುದರಿಂದ, ಸುಪ್ರೀಂ ಕೋರ್ಟ್ ಮೂಲಕ ಹೆಚ್ಚುವರಿ ಕಾನೂನು ಕ್ರಮಕ್ಕೆ ರಾಜ್ಯ ಸರಕಾರ ಸಿದ್ಧತೆ ನಡೆಸುತ್ತಿದೆ’’ ಎಂದು ಹೇಳಿಕೆ ತಿಳಿಸಿದೆ.
ಈ ಹೇಳಿಕೆ ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂಬ ಸರಕಾರದ ನಿಲುವನ್ನು ದೃಢಪಡಿಸಿದೆ.