ಕೇರಳ: ಶಾಲೆ ಪ್ರವೇಶಿಸಿ ಗುಂಡು ಹಾರಿಸಿದ ಹಳೆ ವಿದ್ಯಾರ್ಥಿ
ತ್ರಿಶೂರ್ : ಯುವಕನೋರ್ವ ಮಂಗಳವಾರ ಇಲ್ಲಿನ ಶಾಲೆಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿ ಗುಂಡು ಹಾರಿಸಿ ಭೀತಿ ಹುಟ್ಟಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಘಟನೆ ನೈಕ್ಕನಲ್ ನ ವೀವೇಕೋದಯಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 10.30ಕ್ಕೆ ನಡೆದಿದೆ. ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ಜಗನ್ ಮಾದಕ ದ್ರವ್ಯದ ಪ್ರಭಾವದಿಂದ ತರಗತಿ ಕೊಠಡಿ ಪ್ರವೇಶಿಸಿದ್ದಾನೆ ಹಾಗೂ ಶಿಕ್ಷಕರತ್ತ ಪಿಸ್ತೂಲ್ ತೋರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕೂಡಲೇ ಪೊಲೀಸರು ಶಾಲೆಗೆ ಧಾವಿಸಿದ್ದಾರೆ ಹಾಗೂ ತ್ರಿಶೂರ್ ನ ಮುಲಯಂ ಸಮೀಪದ ನಿವಾಸಿಯಾಗಿರುವ ಜಗನ್ (19)ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈತ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಇಲ್ಲಿ ಕಲಿಯುತ್ತಿರುವಾಗಲೇ ಮಾದಕ ದ್ರವ್ಯ ವ್ಯಸನಿಯಾಗಿದ್ದ ಎಂದು ಅವರು ತಿಳಿಸಿದ್ದಾರೆ.
ಶಾಲೆಯ ಸಿಸಿಟಿವಿಯ ದೃಶ್ಯಾವಳಿಯ ಪ್ರಕಾರ ಈತ ಮೊದಲ ಪ್ರಾಂಶುಪಾಲರ ಕೊಠಡಿಗೆ, ಅನಂತರ ಬೋಧಕ ಸಿಬ್ಬಂದಿ ಕೊಠಡಿಗೆ ಹಾಗೂ ತರಗತಿಗೆ ಪ್ರವೇಶಿಸಿದ್ದಾನೆ.
ಈತ ಶಾಲೆ ಪ್ರವೇಶಿಸಿ ಬೆದರಿಕೆ ಒಡ್ಡಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ. ಈತ ಮಾದಕ ದ್ರವ್ಯ ಅಥವಾ ಮದ್ಯದ ಪ್ರಭಾವದಿಂದ ಈ ಕೃತ್ಯ ಎಸಗಿದ್ದಾನೆಯೇ ಎಂದು ತಿಳಿಯಲು ತ್ರಿಶೂರ್ ಪಟ್ಟಣ ಪೂರ್ವ ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಲಿದ್ದಾರೆ.
‘‘ಆತ ನಿರ್ದಿಷ್ಟವಾಗಿ ಇಬ್ಬರು ಶಿಕ್ಷಕರನ್ನು ಕೇಳಿದ. ನಾವು ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆವು. ಆದರೆ, ಆತ ನಮ್ಮನ್ನು ನಿರ್ಲಕ್ಷಿಸಿದ ಹಾಗೂ ತರಗತಿ ಕೊಠಡಿಗೆ ನುಗ್ಗಿದೆ ಹಾಗೂ ವಿದ್ಯಾರ್ಥಿಗಳತ್ತ ಪಿಸ್ತೂಲ್ ತೋರಿಸಿದ. ಆತ ಮಾದಕ ದ್ರವ್ಯದ ಪ್ರಭಾವಕ್ಕೆ ಒಳಗಾಗಿದ್ದ ಎಂದು ನಾವು ಅರ್ಥ ಮಾಡಿಕೊಂಡಿದ್ದೆವು’’ ಎಂದು ಶಾಲೆಯ ಶಿಕ್ಷಕ ಉಣ್ಣಿ ಕೃಷ್ಣನ್ ತಿಳಿಸಿದ್ದಾರೆ.