ವಯನಾಡ್ ಭೂಕುಸಿತ:| ಡಿಎನ್‌ಎ ಪರೀಕ್ಷೆ ಬಳಿಕ ನಾಪತ್ತೆಯಾದವರ ಸಂಖ್ಯೆ ಪರಿಷ್ಕರಿಸಿದ ಕೇರಳ ಸರಕಾರ

Update: 2024-08-18 17:41 GMT

Photo: PTI

ವಯನಾಡ್ : ವಯನಾಡ್ ಭೂಕುಸಿತದ ಅವಶೇಷಗಳ ಅಡಿಯಲ್ಲಿ ಪತ್ತೆಯಾದ ಕೊಳೆತ ಮೃತದೇಹಗಳು ಹಾಗೂ ದೇಹ ಭಾಗಗಳ ಡಿಎನ್‌ಎ ಪರೀಕ್ಷೆ ಪೂರ್ಣಗೊಂಡ ಬಳಿಕ ನಾಪತ್ತೆಯಾದವರ ಸಂಖ್ಯೆಯನ್ನು ಕೇರಳ ಸರಕಾರ 119ಕ್ಕೆ ಪರಿಷ್ಕರಿಸಿದೆ.

ಸಂತ್ರಸ್ತ ಕುಟುಂಬಗಳಿಗೆ ತುರ್ತು ಹಣಕಾಸು ನೆರವು ಹಾಗೂ ನಷ್ಟ ಪರಿಹಾರ ನೀಡಲು ಆರಂಭಿಸಿದೆ. ನಾಪತ್ತೆಯಾದವರ ಕರಡು ಪಟ್ಟಿ 130 ಹೆಸರುಗಳನ್ನು ಒಳಗೊಂಡಿದೆ. ಡಿಎನ್‌ಎ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಬಳಿಕ ಈ ಸಂಖ್ಯೆಯನ್ನು ಪರಿಷ್ಕೃತಗೊಳಿಸಲಾಗಿದೆ.

ಗುರುತು ಪತ್ತೆಹಚ್ಚಲು ಆಗಸ್ಟ್ 14ರ ವರೆಗೆ 401 ಮೃತದೇಹದ ಭಾಗಗಳ ಡಿಎನ್‌ಎ ಪರೀಕ್ಷೆಗಳನ್ನು ನಡೆಸಲಾಗಿದೆ. ಕೊಳೆತ ಮೃತದೇಹಗಳ ಪರೀಕ್ಷೆ ಕಷ್ಟಕರವಾಗಿರುವುದರಿಂದ ಹಾಗೂ ಗುರುತು ಪತ್ತೆ ಹಚ್ಚಲು ಸಂಬಂಧಿಕರ ಡಿಎನ್‌ಎಯೊಂದಿಗೆ ಹೋಲಿಕೆ ಮಾಡಿ ನೋಡುತ್ತಿರುವುದರಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಚೂರಲ್‌ಮಲದ ಕೆಲವು ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳು ಭೂಕುಸಿತದ ತೀವ್ರತೆಯನ್ನು ಪ್ರದರ್ಶಿಸಿದೆ. ಈ ದೃಶ್ಯಾವಳಿಗಳಲ್ಲಿ ನೀರು ಅಂಗಡಿಗಳ ಒಳಗೆ ನುಗ್ಗುತ್ತಿರುವುದು, ಕಟ್ಟಡ ಹಾಗೂ ಆವರಣದಲ್ಲಿ ದಾಸ್ತಾನು ಇರಿಸಲಾಗಿದ್ದ ಸರಕುಗಳನ್ನು ನಾಶವಾಗುತ್ತಿರುವುದು ಕಂಡು ಬಂದಿದೆ.

ವಯನಾಡ್‌ನಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ಭೂಕುಸಿತದಲ್ಲಿ ನಾಶವಾಗಿರುವ ವೆಲ್ಲಾರ್‌ ಮಲ ಹಾಗೂ ಮುಂಡಕ್ಕೈ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರಕಾರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ಹಾಗೂ ಮೇಪ್ಪಾಡಿಯಲ್ಲಿರುವ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ರವಿವಾರ ತಿಳಿಸಿದೆ.

ವೆಲ್ಲಾರ್‌ಮಲ ಶಾಲೆಯ 552 ವಿದ್ಯಾರ್ಥಿಗಳು ಹಾಗೂ ಮುಂಡಕ್ಕೈ ಶಾಲೆಯ 62 ವಿದ್ಯಾರ್ಥಿಗಳಿಗೆ ಹೆಚ್ಚುವರಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ತಿಳಿಸಿದ್ದಾರೆ.

ಎಸ್‌ಡಿಆರ್‌ಎಫ್ ಹಾಗೂ ಸಿಎಂಡಿಆರ್‌ಎಫ್‌ನಿಂದ 12 ಜನರಿಗೆ 72 ಲಕ್ಷ ರೂ. ಹಣಕಾಸು ನೆರವು ಬಿಡುಗಡೆ ಮಾಡಲಾಗಿದೆ. ತುರ್ತು ಹಣಕಾಸು ನೆರವಾಗಿ 617ಕ್ಕೂ ಅಧಿಕ ಜನರಿಗೆ 10 ಸಾವಿರ ನೀಡಲಾಗಿದೆ. ಇದಲ್ಲದೆ, ಅಂತ್ಯಕ್ರಿಯೆಗಾಗಿ 124 ಜನರಿಗೆ 10 ಸಾವಿರ ರೂ. ಒದಗಿಸಲಾಗಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News