ಕೇರಳ | ಅಟ್ಟುಕಲ್ ಭಗವತಿ ದೇವಸ್ಥಾನಕ್ಕೆ ಪೊಂಗಲ ಅರ್ಪಿಸಲು ಬರುವ ಭಕ್ತಾಧಿಗಳಿಗೆ ಆಶ್ರಯ ನೀಡಿದ ಮಣಕ್ಕಾಡ್ ಮಸೀದಿ

Update: 2025-03-14 15:34 IST
ಕೇರಳ | ಅಟ್ಟುಕಲ್ ಭಗವತಿ ದೇವಸ್ಥಾನಕ್ಕೆ ಪೊಂಗಲ ಅರ್ಪಿಸಲು ಬರುವ ಭಕ್ತಾಧಿಗಳಿಗೆ ಆಶ್ರಯ ನೀಡಿದ ಮಣಕ್ಕಾಡ್ ಮಸೀದಿ

Photo credit: NIRMAL HARINDRAN/thehindu.com

  • whatsapp icon

ತಿರುವನಂತಪುರಂ : ಅಟ್ಟುಕಲ್ ಭಗವತಿ ದೇವಸ್ಥಾನಕ್ಕೆ ಪೊಂಗಲ ಅರ್ಪಿಸಲು ಕೇರಳ ರಾಜ್ಯ ರಾಜಧಾನಿ ತಿರುವನಂತಪುರಂಗೆ ಆಗಮಿಸಿದ ಸಾವಿರಾರು ಮಹಿಳಾ ಭಕ್ತರಿಗೆ ಮಣಕ್ಕಾಡ್ ಜುಮಾ ಮಸೀದಿ ವಸತಿ, ಪಾರ್ಕಿಂಗ್‌, ನೀರಿನ ವ್ಯವಸ್ಥೆ ಕಲ್ಪಿಸಿದೆ.

ಅಟ್ಟುಕಲ್ ಭಗವತಿ ದೇವಸ್ಥಾನಕ್ಕೆ ಪೊಂಗಲ ಅರ್ಪಿಸಲು ವಾಹನಗಳಲ್ಲಿ ಬರುವ ಭಕ್ತರಿಗೆ ಮಸೀದಿಯ ಪಾರ್ಕಿಂಗ್ ಸ್ಥಳದಲ್ಲಿ ಸಂಪೂರ್ಣವಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಚಾಲಕರಿಗೆ ಮಸೀದಿಯೊಳಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಇದಲ್ಲದೆ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳು ಮತ್ತು ಭಕ್ತಾದಿಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳಿಗೆ ಬಳಕೆಗಾಗಿ ಒಂದು ಕೊಠಡಿಯನ್ನು ಕೂಡ ಮೀಸಲಿರಿಸಲಾಗಿದೆ.

ಮಸೀದಿಯು ಪ್ರತಿ ವರ್ಷ ಇದೇ ರೀತಿ ಸೌಲಭ್ಯಗಳನ್ನು ಕಲ್ಪಿಸುತ್ತದೆ. ರಮಝಾನ್ ಅವಧಿಯಲ್ಲಿ ಉಪವಾಸ ಇರುವ ಕಾರಣ ಭಕ್ತಾಧಿಗಳಿಗೆ ಈ ಬಾರಿ ಆಹಾರದ ವ್ಯವಸ್ಥೆಯನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ನಾವು ನಿನ್ನೆ ಉಪವಾಸವನ್ನು ಮುರಿದ ಬಳಿಕ ರಾತ್ರಿ ಭಕ್ತಾಧಿಗಳಿಗೆ ಆಹಾರದ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ ಎಂದು ಮಸೀದಿಯ ಪ್ರತಿನಿಧಿಯೋರ್ವರು ಹೇಳಿದರು.

ಮಸೀದಿಯಲ್ಲದೆ ಸ್ಥಳೀಯ ಸೇಂಟ್ ಜೋಸೆಫ್ ಮೆಟ್ರೊಪಾಲಿಟನ್ ಕ್ಯಾಥೆಡ್ರಲ್ ಚರ್ಚ್ ಕೂಡ ಪೊಂಗಲ ಅರ್ಪಿಸಲು ಆಗಮಿಸಿದ ಮಹಿಳಾ ಭಕ್ತರಿಗೆ ನೀರು, ಶೌಚಾಲಯ ಮತ್ತು ವಿರಾಮದ ವ್ಯವಸ್ಥೆಯನ್ನು ಕಲ್ಪಿಸಿದೆ. ಕಳೆದ ವರ್ಷವೂ ಇದೇ ರೀತಿ ಭಕ್ತರಿಗೆ ಸೌಲಭ್ಯವನ್ನು ಕಲ್ಪಿಸಿತ್ತು. ಇದಲ್ಲದೆ ವೆಲ್ಲಯಂಬಲಂನಲ್ಲಿರುವ ಸೇಂಟ್ ಥೆರೆಸಾ ಆಫ್ ಲಿಸಿಯಕ್ಸ್ ಕ್ಯಾಥೋಲಿಕ್ ಚರ್ಚ್ನಲ್ಲಿ ಭಕ್ತರಿಗೆ ಮಜ್ಜಿಗೆಯನ್ನು ನೀಡಲಾಗಿದೆ.

ಅಟ್ಟುಕಲ್ ಭಗವತಿ ದೇವಸ್ಥಾನದ ಪ್ರಧಾನ ದೇವರಿಗೆ ‘ಪೊಂಗಲ’ ಅರ್ಪಿಸಲು ಸಾವಿರಾರು ಮಹಿಳಾ ಭಕ್ತರು ತಿರುವನಂತಪುರಂಗೆ ಆಗಮಿಸಿದರು. ಅಟ್ಟುಕಲ್ ದೇವಾಲಯದ ವಾರ್ಷಿಕ ಉತ್ಸವದ ಭಾಗವಾಗಿ ಮಹಿಳೆಯರು ಪೊಂಗಲನ್ನು ಸಿದ್ಧಪಡಿಸುವುದು ಆಚರಣೆಯಾಗಿದೆ. ಈ ಸ್ಥಳವನ್ನು ಮಹಿಳೆಯರ ಶಬರಿಮಲೆ ಎಂದು ಕೂಡ ಕರೆಯಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News