ಕೇರಳ:ಭೂಕುಸಿತಗಳಲ್ಲಿ ಓರ್ವ ಸಾವು,ಮನೆಗಳಿಗೆ ಹಾನಿ
ತಿರುವನಂತಪುರ : ಕೇರಳದಲ್ಲಿ ರವಿವಾರ ಭಾರೀ ಮಳೆಯಾಗಿದ್ದು, ಇಡುಕ್ಕಿ ಜಿಲ್ಲೆಯ ಕೆಲವೆಡೆ ಭೂಕುಸಿತಗಳು ಸಂಭವಿಸಿವೆ. ಓರ್ವ ವ್ಯಕ್ತಿ ಮೃತಪಟ್ಟಿದ್ದು,ಹಲವಾರು ಮನೆಗಳಿಗೆ ಹಾನಿಯಾಗಿದೆ.
ಭೂಕುಸಿತದಿಂದಾಗಿ ತನ್ನ ಮನೆ ಕೊಚ್ಚಿಹೋಗಿದ್ದರಿಂದ 55 ವರ್ಷದ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. ಅಲ್ಲದೆ ಪ್ರದೇಶದಲ್ಲಿಯ ಕೆಲವು ಮನೆಗಳಿಗೆ ತೀವ್ರ ಹಾನಿಯಾಗಿದ್ದು, ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯವುಂಟಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.
ಉತ್ತರ ತಮಿಳುನಾಡು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಚಂಡಮಾರುತದ ಪರಿಚಲನೆಯಿಂದಾಗಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಸೋಮವಾರ ಎರ್ನಾಕುಲಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಹೊರಡಿಸಲಾಗಿದ್ದು, ಇತರ ಒಂಭತ್ತು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಹೊರಡಿಸಲಾಗಿದೆ.
ಭೂಕುಸಿತಗಳ ಅಪಾಯದ ಹಿನ್ನೆಲೆಯಲ್ಲಿ ಇಡುಕ್ಕಿ ಜಿಲ್ಲಾಡಳಿತವು ಮುನ್ನಾರ್-ಕುಮಿಲಿ ರಾಜ್ಯ ಹೆದ್ದಾರಿಯಲ್ಲಿ ಉಡಂಬಚೋಳ ಮತ್ತು ಚೆರಿಯಾರ್ ಪ್ರದೇಶಗಳ ನಡುವೆ ನ.8ರಿಂದ ಮುಂದಿನ ಸೂಚನೆಯವರೆಗೆ ರಾತ್ರಿ ಪ್ರಯಾಣವನ್ನು ನಿರ್ಬಂಧಿಸಿದೆ.