ಕೇರಳ ಪ್ರೊಫೆಸರ್ ರ ಕೈಕಡಿದ ಪ್ರಕರಣ: 6 ಮಂದಿ ದೋಷಿ, ಐವರು ದೋಷಮುಕ್ತ
ತಿರುವನಂತಪುರಂ: ಪ್ರವಾದಿ ಮುಹಮ್ಮದ್ ರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಪ್ರೊಫೆಸರ್ ಒಬ್ಬರ ಕೈ ಕಡಿದ ಪ್ರಕರಣದ ಆರು ಆರೋಪಿಗಳು ದೋಷಿಗಳು ಎಂಬುದಾಗಿ ಕೇರಳದ ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ನ್ಯಾಯಾಲಯವೊಂದು ಬುಧವಾರ ಘೋಷಿಸಿದೆ.
ಪ್ರಶ್ನೆ ಪತ್ರಿಕೆಯೊಂದರ ಪ್ರಶ್ನೆಯೊಂದರಲ್ಲಿ ಪ್ರವಾದಿ ಮುಹಮ್ಮದ್ ರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ 2010 ಜುಲೈ 4ರಂದು ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿರುವ ನ್ಯೂಮನ್ ಕಾಲೇಜಿನ ಪ್ರೊಫೆಸರ್ ಟಿ.ಜೆ. ಜೋಸೆಫ್ರ ಬಲಗೈಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸದಸ್ಯರೆನ್ನಲಾದ ವ್ಯಕ್ತಿಗಳು ಕಡಿದಿದ್ದರು. ಈಗ ಈ ಸಂಘಟನೆಯನ್ನು ನಿಷೇಧಿಸಲಾಗಿದೆ.
ಕಾಲೇಜಿನ ಮಲಯಾಳಮ್ ವಿಭಾಗದ ಮುಖ್ಯಸ್ಥ ಜೋಸೆಫ್, ತನ್ನ ಪ್ರಶ್ನೆ ಪತ್ರಿಕೆಗಾಗಿ ಚಿತ್ರ ನಿರ್ದೇಶಕ ಪಿ.ಟಿ. ಕುಂಜು ಮುಹಮ್ಮದ್ ರ ಸಣ್ಣ ಕತೆಯೊಂದರ ಭಾಗವೊಂದನ್ನು ಆಯ್ದುಕೊಂಡಿದ್ದರು. ಆ ಭಾಗವು ದೇವರು ಮತ್ತು ಓರ್ವ ‘‘ಹುಚ್ಚ’’ನ ನಡುವಿನ ಕಾಲ್ಪನಿಕ ಸಂಭಾಷಣೆಯನ್ನು ಹೊಂದಿತ್ತು. ಪ್ರೊಫೆಸರ್ ಆ ‘‘ಹುಚ್ಚ’’ನ ಸ್ಥಾನದಲ್ಲಿ ‘‘ಮುಹಮ್ಮದ್’’ ಎಂಬುದಾಗಿ ಬರೆದಿದ್ದು ವ್ಯಾಪಕ ವಿವಾದಕ್ಕೊಳಗಾಗಿತ್ತು.
ಜೋಸೆಫ್ ಎರ್ನಾಕುಳಂ ಜಿಲ್ಲೆಯ ಮೂವಾಟ್ಟುಪುಳದಲ್ಲಿರುವ ಚರ್ಚ್ ಒಂದರಿಂದ ಮನೆಗೆ ವಾಪಸಾಗುತ್ತಿದ್ದಾಗ ಹಂತಕರು ದಾಳಿ ನಡೆಸಿದರು. ಅವರ ಕೈಯನ್ನು ಮುಖ್ಯ ಆರೋಪಿ ಕಡಿದನು ಎನ್ನಲಾಗಿದೆ. ಅವನು ಈಗಲೂ ನಾಪತ್ತೆಯಾಗಿದ್ದಾನೆ. ವಿಶೇಷ ಎನ್ಐಎ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಕೆ. ಭಾಸ್ಕರ್ ಬುಧವಾರ ಪ್ರಕರಣದ ಎರಡನೇ ಹಂತದ ವಿಚಾರಣೆಗೆ ಸಂಬಂಧಿಸಿ ತೀರ್ಪು ನೀಡಿದರು.
ಕೊಲೆಯತ್ನ, ಪಿತೂರಿ ಮತ್ತು ಭಾರತೀಯ ದಂಡ ಸಂಹಿತೆ ಮತ್ತು ಕಠಿಣ ಯುಎಪಿಎಯಡಿ ದಾಖಲಾದ ವಿವಿಧ ಆರೋಪಗಳಲ್ಲಿ ಆರು ಮಂದಿ ದೋಷಿಯಾಗಿದ್ದಾರೆ ಎಂದು ನ್ಯಾಯಾಧೀಶರು ಹೇಳಿದರು. ಅದೇ ವೇಳೆ, ಪುರಾವೆಯ ಕೊರತೆಯಿದೆ ಎಂದು ಹೇಳಿ ಐವರನ್ನು ನ್ಯಾಯಾಧೀಶರು ದೋಷಮುಕ್ತಗೊಳಿಸಿದರು.
ಮೊದಲ ಹಂತದಲ್ಲಿ, 31 ಆರೋಪಿಗಳು ವಿಚಾರಣೆ ಎದುರಿಸಿದ್ದರು. ಅವರ ಪೈಕಿ 13 ಮಂದಿಯನ್ನು ದೋಷಿ ಎಂಬುದಾಗಿ 2015ರಲ್ಲಿ ನ್ಯಾಯಾಲಯ ಘೋಷಿಸಿತ್ತು ಮತ್ತು 18 ಮಂದಿಯನ್ನು ದೋಷಮುಕ್ತಗೊಳಿಸಿತ್ತು.