ಕೇರಳ: ರ‍್ಯಾಗಿಂಗ್ ಗೆ ವಿದ್ಯಾರ್ಥಿ ಬಲಿ ಪ್ರಕರಣ; ಎಲ್ಲಾ ಆರೋಪಿಗಳ ಬಂಧನ
ತಿರುವನಂತಪುರ : ಕಲ್ಪೆಟ್ಟಾದ ಪೂಕೋಡ್ ನ ಪಶು ವೈದ್ಯಕೀಯ ಹಾಗೂ ಪ್ರಾಣಿ ವಿಜ್ಞಾನಗಳ ಕಾಲೇಜಿನಲ್ಲಿ ರ‍್ಯಾಗಿಂಗ್ ಹಾಗೂ ಗುಂಪಿನಿಂದ ವಿಚಾರಣೆಯ ನಂತರ ವಿದ್ಯಾರ್ಥಿ ಜೆ.ಎಸ್. ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾದ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.
ವಯನಾಡ್ ಜಿಲ್ಲಾ ಪೊಲೀಸ್ ವರಿಷ್ಠ ಟಿ. ನಾರಾಯಣ್ ಅವರ ಮೇಲ್ವಿಚಾರಣೆಯಲ್ಲಿ ಕಲ್ಪೆಟ್ಟಾ ಡಿವೈಎಸ್ಪಿ ಟಿ.ಎನ್. ಸಜೀವ್ ನೇತೃತ್ವದ 24 ಸದಸ್ಯರ ವಿಶೇಷ ತನಿಖಾ ತಂಡ ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದು, ಶನಿವಾರ 7 ಮಂದಿ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡಿದೆ.
ವಯನಾಡ್ ನ ಪೊಲೀಸ್ ಠಾಣೆಗಳ 7 ಅಧಿಕಾರಿಗಳ ತಂಡ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರನ್ನು ಪತ್ತನಂತಿಟ್ಟದ ಜೆ. ಅಜಯ್ (24), ಕೊಲ್ಲಂನ ಅಲ್ತಾಫ್ (21), ಕೋಝಿಕ್ಕೋಡ್ ನ ವಿ. ಆದಿತ್ಯನ್ (20), ಮಲಪ್ಪುರಂನ ಇ.ಕೆ. ಸೂದ್ ರಿಸಾಲ್(21), ಕೊಲ್ಲಂನ ಸಿಂಜೊ ಜಾನ್ಸನ್ (22), ಮಲಪ್ಪುರಂನ ಎಂ. ಮುಹಮ್ಮದ್ ದಾನಿಶ್ (23) ಹಾಗೂ ಕೊಲ್ಲಂನ ಆರ್.ಎಸ್. ಕಾಶಿನಾಥನ್ (25) ಎಂದು ಗುರುತಿಸಲಾಗಿದೆ.
ಈ ನಡುವೆ ಕಾಲೇಜು ಕ್ಯಾಂಪಸ್ ನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ವಯನಾಡ್ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ರ‍್ಯಾಲಿ ನಡೆಸಿದ್ದಾರೆ. ಶಾಸಕರಾದ ಟಿ. ಸಿದ್ದೀಕ್, ಐ.ಸಿ. ಬಾಲಕೃಷ್ಣನ್ ಹಾಗೂ ಡಿಸಿಸಿ ಅಧ್ಯಕ್ಷ ಎನ್.ಡಿ. ಅಪ್ಪಚ್ಚನ್ ರ‍್ಯಾಲಿಯ ನೇತೃತ್ವ ವಹಿಸಿದ್ದರು.