ಇರಾನ್ ವಶಪಡಿಸಿಕೊಂಡ ಹಡಗಿನಲ್ಲಿದ್ದ ಕೇರಳದ ಮಹಿಳೆ ಮನೆಗೆ ವಾಪಸ್
ಹೊಸದಿಲ್ಲಿ: ಇರಾನ್ ವಶಪಡಿಸಿಕೊಂಡಿರುವ ಇಸ್ರೇಲ್ ಸಂಯೋಜಿತ ಸರಕು ಸಾಗಣೆ ಹಡಗಿನ 17 ಭಾರತೀಯ ಸಿಬ್ಬಂದಿಗಳ ಪೈಕಿ ಏಕೈಕ ಮಹಿಳೆಯನ್ನು ಗುರುವಾರ ಬಿಡುಗಡೆಗೊಳಿಸಲಾಗಿದೆ. ಉಳಿದ ಸಿಬ್ಬಂದಿಗಳ ಯೋಗಕ್ಷೇಮವನ್ನು ಖಚಿತಪಡಿಸಲು ಭಾರತವು ಇರಾನ್ ಅಧಿಕಾರಿಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.
ಕೇರಳದ ತ್ರಿಶೂರು ನಿವಾಸಿಯಾಗಿರುವ ಆ್ಯನ್ ಟೆಸ್ಸಾ ಜೋಸೆಫ್ ಗುರುವಾರ ಅಪರಾಹ್ನ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅವರ ಬಿಡುಗಡೆಗಾಗಿ ಟೆಹರಾನ್‌ನಲ್ಲಿಯ ಭಾರತೀಯ ರಾಯಭಾರ ಕಚೇರಿಯು ಇರಾನ್ ಸರಕಾರದೊಂದಿಗೆ ಸಂಘಟಿತ ಪ್ರಯತ್ನಗಳನ್ನು ನಡೆಸಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಸರಕು ಸಾಗಣೆ ಹಡಗು ಎಂಎಸ್‌ಸಿ ಏರೀಸ್‌ನ 25 ಸಿಬ್ಬಂದಿಗಳ ಪೈಕಿ 17 ಜನರು ಭಾರತೀಯರಾಗಿದ್ದು,ಎ.13ರಂದು ಹೊರ್ಮುಝ್ ಜಲಸಂಧಿಯಲ್ಲಿ ಇರಾನಿನ ಇಸ್ಲಾಮಿಕ್ ರೆವೊಲ್ಯೂಷರಿ ಗಾರ್ಡ್ ಕಾರ್ಪ್ಸ್ ಅದನ್ನು ವಶಪಡಿಸಿಕೊಂಡಿತ್ತು. ಸಮುದ್ರ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹಡಗನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇರಾನಿನ ವಿದೇಶಾಂಗ ಸಚಿವಾಲಯವು ನಂತರ ತಿಳಿಸಿತ್ತು.
ಭಾರತೀಯ ರಾಯಭಾರ ಕಚೇರಿಯು ಇರಾನಿ ಅಧಿಕಾರಿಗಳ ಬೆಂಬಲದೊಂದಿಗೆ ಜೋಸೆಫ್ ಭಾರತಕ್ಕೆ ಮರಳಲು ಅನುಕೂಲವನ್ನು ಕಲ್ಪಿಸಿದೆ. ಉಳಿದ 16 ಭಾರತೀಯ ಸಿಬ್ಬಂದಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ರಾಯಭಾರ ಕಚೇರಿಯು ಇರಾನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪ್ರಾದೇಶಿಕ ಪಾಸಪೋರ್ಟ್ ಅಧಿಕಾರಿ ಜೋಸೆಫ್‌ರನ್ನು ಬರಮಾಡಿಕೊಳ್ಳುತ್ತಿರುವ ಚಿತ್ರವನ್ನೂ ಜೈಸ್ವಾಲ್ ಪೋಸ್ಟ್ ಮಾಡಿದ್ದಾರೆ.
ಉಳಿದ 16 ಭಾರತೀಯ ಸಿಬ್ಬಂದಿಗಳು ಆರೋಗ್ಯವಾಗಿದ್ದಾರೆ ಮತ್ತು ಭಾರತದಲ್ಲಿಯ ತಮ್ಮ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದೂ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಪೋರ್ಚುಗೀಸ್ ಧ್ವಜವನ್ನು ಹೊಂದಿರುವ ಹಡಗಿನಲ್ಲಿರುವ ಭಾರತೀಯ ಸಿಬ್ಬಂದಿಗಳಲ್ಲಿ ಹಡಗಿನ ಕಪ್ತಾನ ಸೇರಿದ್ದಾರೆ. ಹಡಗಿನ ಸಿಬ್ಬಂದಿಗಳಲ್ಲಿ ನಾಲ್ವರು ಫಿಲಿಪ್ಪೀನ್ಸ್,ಇಬ್ಬರು ಪಾಕಿಸ್ತಾನಕ್ಕೆ ಸೇರಿದ್ದರೆ ರಶ್ಯಾ ಮತ್ತು ಎಸ್ತೋನಿಯಾದ ತಲಾ ಓರ್ವರಿದ್ದಾರೆ.
ಸಿಬ್ಬಂದಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ತಾನು ಸಂಬಂಧಿತ ಅಧಿಕಾರಿಗಳ ಸಂಪರ್ಕದಲ್ಲಿರುವುದಾಗಿ ಇಟಾಲಿಯನ್-ಸ್ವಿಸ್ ಶಿಪ್ಪಿಂಗ್ ಗ್ರೂಪ್ ಎಂಎಸ್‌ಸಿ ತಿಳಿಸಿದೆ. ಹಡಗು ಇಸ್ರೇಲಿ ಬಿಲಿಯಾಧೀಶ ಇಯಾಲ್ ಆಫೆರ್ ಅವರ ರೆಡಿಯಾಕ್ ಗ್ರೂಪ್‌ನ ಭಾಗವಾಗಿರುವ ಲಂಡನ್ನಿನ ರೆಡಿಯಾಕ್ ಮಾರಿಟೈಮ್‌ಗೆ ಸಂಬಂಧಿಸಿದೆ